21st JUNE.-DAILY CURRENT AFFAIRS BRIEF

21st JUNE

 

1.ಜಮ್ಮುಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ

ಪ್ರಮುಖ ಸುದ್ದಿ

  • ಪಿಡಿಪಿ ಜತೆಗಿನ ಮೈತ್ರಿಯನ್ನು ಬಿಜೆಪಿ ಮುರಿದುಕೊಂಡ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆಗೆ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅಂಕಿತ ಹಾಕಿದ್ದಾರೆ.

 

ಮುಖ್ಯ ಅಂಶಗಳು

BACK TO BASICS

ಜಮ್ಮುಕಾಶ್ಮೀರಕ್ಕೆ ರಾಷ್ಟ್ರಪತಿ ಆಳ್ವಿಕೆಯ ಬದಲಾಗಿ ರಾಜ್ಯಪಾಲರ ಆಳ್ವಿಕೆ ಏಕೆ?

  • ಸಾಮಾನ್ಯವಾಗಿ ಯಾವುದೇ ರಾಜ್ಯ ಸರ್ಕಾರಗಳು ಬಹುಮತವಿಲ್ಲದೆ ಬಿದ್ದುಹೋದರೆ, ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗುತ್ತದೆ. ಸಂವಿಧಾನದ 356 ನೇ ವಿಧಿಯ ಪ್ರಕಾರ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವುದಕ್ಕೆ ಸಾಧ್ಯವಿದೆ. ಆದರೆ ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನವೇ ಇರುವುದರಿಂದ ಇದು ಸಾಧ್ಯವಿಲ್ಲ.
  • ಜಮ್ಮು ಕಾಶ್ಮೀರ ಸಂವಿಧಾನದ 92 ನೇ ವಿಧಿಯ ಪ್ರಕಾರ ಇಲ್ಲಿ ಆರು ತಿಂಗಳುಗಳ ಕಾಲ ರಾಜ್ಯಪಾಲರ ಆಳ್ವಿಕೆಯನ್ನು ಹೇರಬಹುದು. ಈ ಅವಧಿಯಲ್ಲಿ ಜಮ್ಮು-ಕಾಶ್ಮೀರ ವಿಧಾನಸಭೆ ರಾಜ್ಯಪಾಲರ ಮೇಲುಸ್ತುವಾರಿಯಲ್ಲಿರುತ್ತದೆ. ಆರು ತಿಂಗಳ ಕಾಲ ಜಮ್ಮು ಕಾಶ್ಮೀರ ವಿಧಾನಸಭೆ ಅಮಾನತಿನಲ್ಲಿರುತ್ತದೆ.
  • ವಿಧಾನಸಭೆ ಅಮಾನತಿನಲ್ಲಿದ್ದರೂ, ಹಾಲಿ ಶಾಸಕರೆಲ್ಲರೂ ಶಾಸಕರಾಗಿಯೇ ಇರುತ್ತಾರೆ. ಆದರೆ ಯಾವುದೇ ಶಾಸನೀಯ ಅಧಿಕಾರಗಳು ಅವರಿಗಿರುವುದಿಲ್ಲ. ಈ ಸಮಯದಲ್ಲಿ ರಾಜ್ಯಪಾಲರು ಶಾಸನೀಯ ಅಧಿಕಾರ ಪಡೆದಿರುತ್ತಾರೆ.
  • ಈ ಆರು ತಿಂಗಳ ಅವಧಿಯಲ್ಲಿ ವಿಶ್ವಾಸ ಮತ ಗಳಿಸಿ ಯಾವುದೇ ಪಕ್ಷ ಅಥವಾ ಮೈತ್ರಿ ಕೂಟಗಳು ಸರ್ಕಾರ ನಡೆಸಲು ಮುಂದಾದರೆ ನಡೆಸಬಹುದು.
  • ಆರು ತಿಂಗಳು ಕಳೆದರೂ ಸರ್ಕಾರ ರಚನೆಯಾಗದಿದ್ದಲ್ಲಿ ಜಮ್ಮು-ಕಾಶ್ಮೀರವು ರಾಷ್ಟ್ರಪತಿ ಆಳ್ವಿಕೆಗೆ ಒಳಪಡುತ್ತದೆ. ಅಕಸ್ಮಾತ್ ರಾಜ್ಯಪಾಲರು ಅಥವಾ ರಾಷ್ಟ್ರಪತಿ ಆಳ್ವಿಕೆಯ ಸಮಯದಲ್ಲಿ ರಾಜ್ಯಪಾಲರು ವಿಧಾನಸಭೆಯನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡರೆ, ಅದು ರದ್ದುಗೊಂಡ ಆರು ತಿಂಗಳೊಳಗೆ ಚುನಾವಣೆ ನಡೆಸಬೇಕು. ಆರು ತಿಂಗಳೊಳಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ವಿಫಲವಾದರೆ, ಅದಕ್ಕೆ ಕಾರಣಗಳನ್ನು ನೀಡಬೇಕಾಗುತ್ತದೆ.

 

2.ಜಲಾಶಯ ಸುರಕ್ಷತೆ ವಿಧೇಯಕ 2018ರ ಮಂಡನೆ ಪ್ರಸ್ತಾಪಕ್ಕೆಸಂಪುಟದ ಅಂಗೀಕಾರ

 ಪ್ರಮುಖ ಸುದ್ದಿ 

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜಲಾಶಯ ಸುರಕ್ಷತೆ ವಿಧೇಯಕ 2018ರ ಮಂಡನೆ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.

 

ಇದರಿಂದ ಆಗುವ  ಪ್ರಯೋಜನಗಳೇನು ?

 

  • ಇದು ಅಣೆಕಟ್ಟೆಗಳ ಸುರಕ್ಷತೆ ಮತ್ತು ಅಂಥ ಅಣೆಕಟ್ಟೆಗಳ ಪ್ರಯೋಜನದ ಹಿತ ಕಾಯಲು ಭಾರತದ ಎಲ್ಲ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಏಕರೂಪದ ಜಲಾಶಯ ಸುರಕ್ಷತೆ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲು ನೆರವಾಗುತ್ತದೆ. ಇದು ಜನ ಮತ್ತು ಜಾನುವಾರುಗಳ ಜೀವ ಮತ್ತು ಆಸ್ತಿಯ ರಕ್ಷಣೆಗೂ ನೆರವಾಗುತ್ತದೆ.
  • ಭಾರತದ ಮತ್ತು ಅಂತಾರಾಷ್ಟ್ರೀಯ ಪ್ರಮುಖ ತಜ್ಞರೊಂದಿಗೆ ವಿಸ್ತೃತ ಸಮಾಲೋಚನೆಯ ಬಳಿಕ ಕರಡು ಮಸೂದೆಯನ್ನು ಆಖೈರುಗೊಳಿಸಲಾಗುತ್ತದೆ.

 

ಮುಖ್ಯ ಅಂಶಗಳು

 

  • ಈ ಮಸೂದೆಯು ದೇಶದಲ್ಲಿರುವ ಎಲ್ಲ ನಿರ್ದಿಷ್ಟಪಡಿಸಲಾದ ಜಲಾಶಯಗಳ ಸುರಕ್ಷಿತ ಕಾರ್ಯಾಚರಣೆಗಾಗಿ ಸೂಕ್ತ ನಿಗಾ, ಪರಿಶೀಲನೆ, ಕಾರ್ಯಾಚರಣೆ ಮತ್ತು ನಿರ್ವಹಣೆ ಒದಗಿಸುತ್ತದೆ.
  • ಅಣೆಕಟ್ಟಿಗಳ ಸುರಕ್ಷತೆ ಕುರಿತು ರಾಷ್ಟ್ರೀಯ ಸಮಿತಿಯ ಸ್ಥಾಪನೆಗೆ ಮಸೂದೆ ಅವಕಾಶ ನೀಡುತ್ತದೆ, ಇದು ಅಣೆಕಟ್ಟೆಗಳ ಸುರಕ್ಷತಾ ನೀತಿಗಳನ್ನು ವಿಕಸನಗೊಳಿಸುತ್ತದೆ ಮತ್ತು ಆ ಉದ್ದೇಶಕ್ಕಾಗಿ ಅಗತ್ಯವಾದ ಅಗತ್ಯವಿರುವ ನಿಯಮಗಳನ್ನು ಶಿಫಾರಸು ಮಾಡುತ್ತದೆ.
  • ಈ ಮಸೂದೆಯು ದೇಶದಲ್ಲಿನ ಅಣೆಕಟ್ಟೆಗಳ ಸುರಕ್ಷತೆಗಾಗಿ ಗುಣಮಟ್ಟ, ಮಾರ್ಗಸೂಚಿ ಮತ್ತು ನೀತಿಗಳನ್ನು ಜಾರಿ ಮಾಡುವುದಕ್ಕಾಗಿ ಕಾರ್ಯ ನಿರ್ವಹಿಸಲು ನಿಯಂತ್ರಣ ಕಾಯವಾಗಿ ರಾಷ್ಟ್ರೀಯ ಅಣೆಕಟ್ಟೆ ಸುರಕ್ಷತಾ ಪ್ರಾಧಿಕಾರ ರಚನೆಗೂ ಅವಕಾಶ ನೀಡುತ್ತದೆ.
  • ಈ ಮಸೂದೆಯು ಅಣೆಕಟ್ಟೆ ಸುರಕ್ಷತೆಗಾಗಿ ರಾಜ್ಯ ಸರ್ಕಾರಗಳಿಂದ ರಾಜ್ಯ ಸಮಿತಿಯ ರಚನೆಗೂ ಅವಕಾಶ ಕಲ್ಪಿಸುತ್ತದೆ.

BACK TO BASICS

ರಾಷ್ಟ್ರೀಯ ಅಣೆಕಟ್ಟೆ ಸುರಕ್ಷತಾ ಪ್ರಾಧಿಕಾರ

 

  • ಇದು ಅಣೆಕಟ್ಟೆ ಸುರಕ್ಷತೆಗೆ ಸಂಬಂಧಿಸಿದ ದತ್ತಾಂಶ ಮತ್ತು ರೂಢಿಗಳ ಪ್ರಮಾಣೀಕರಣಕ್ಕಾಗಿ ರಾಜ್ಯ ಅಣೆಕಟ್ಟೆ ಸುರಕ್ಷತೆ ಸಂಸ್ಥೆಗಳು ಮತ್ತು ಅಣೆಕಟ್ಟುಗಳ ಮಾಲೀಕರೊಂಗೆ ಸಂಬಂಧವನ್ನು ಕಾಪಾಡುತ್ತದೆ;
  • ಇದು ರಾಜ್ಯಗಳಿಗೆ ಮತ್ತು ರಾಜ್ಯ ಅಣೆಕಟ್ಟು ಸುರಕ್ಷತೆ ಸಂಘಟನೆಗಳಿಗೆ ತಾಂತ್ರಿಕ ಮತ್ತು ನಿರ್ವಹಣಾತ್ಮಕ ನೆರವನ್ನು ಒದಗಿಸುತ್ತದೆ;
  • ಇದು ದೇಶದಲ್ಲಿರುವ ಎಲ್ಲಾ ಅಣೆಕಟ್ಟುಗಳ ರಾಷ್ಟ್ರೀಯ ಮಟ್ಟದ ದತ್ತಾಂಶ-ಮೂಲ ಮತ್ತು ಪ್ರಮುಖ ಅಣೆಕಟ್ಟೆಗಳ ವೈಫಲ್ಯದ ದಾಖಲೆಗಳನ್ನು ನಿರ್ವಹಿಸುತ್ತದೆ;
  • ಯಾವುದೇ ಪ್ರಮುಖ ಜಲಾಶಯದ ವೈಫಲ್ಯದ ಕಾರಣವನ್ನುಇದು ಪರಿಶೀಲಿಸುತ್ತದೆ;
  • ಇದು ಅಣೆಕಟ್ಟುಗಳು ಮತ್ತು ಅದರ ಪ್ರಯೋಜನಗಳ ನಿಯಮಿತ ತಪಾಸಣೆ ಮತ್ತು ವಿವರವಾದ ಪರಿಶೀಲನೆಗೆ ಮಾನದಂಡದ ಮಾರ್ಗಸೂಚಿಗಳನ್ನು ಮತ್ತು ಚೆಕ್-ಲಿಸ್ಟ್ಗಳನ್ನು ಪ್ರಕಟಿಸುತ್ತದೆ ಮತ್ತು ನವೀಕರಿಸುತ್ತದೆ;
  • ಹೊಸ ಅಣೆಕಟ್ಟುಗಳ ಕಾಮಗಾರಿಯ ಪರಿಶೀಲನೆ, ವಿನ್ಯಾಸ ಅಥವಾ ನಿರ್ಮಾಣದ ಕಾರ್ಯಗಳನ್ನು ನಿರ್ವಹಿಸುವ ಸೂಚಿತ ಸಂಸ್ಥೆಗಳಿಗೆ ಇದು ಮಾನ್ಯತೆ ಅಥವಾ ಮನ್ನಣೆಯನ್ನು ಪ್ರದಾನ ಮಾಡುತ್ತದೆ;
  • ಇದು ಎರಡು ರಾಜ್ಯಗಳನಡುವಿನ ರಾಜ್ಯ ಅಣೆಕಟ್ಟು ಸುರಕ್ಷತೆ ಸಂಸ್ಥೆ ಅಥವಾ ರಾಜ್ಯಗಳ ರಾಜ್ಯ ಅಣೆಕಟ್ಟೆ ಸುರಕ್ಷತೆ ಸಂಘಟನೆ ಮತ್ತು ಆ ಅಣೆಕಟ್ಟೆ ಮಾಲೀಕರ ನಡುವಿನ ಬಗೆಹರಿಯದ ಸಮಸ್ಯೆಗಳತ್ತ ಗಮನಹರಿಸಿ, ಸೂಕ್ತ ಪರಿಹಾರವನ್ನು ಹುಡುಕುತ್ತದೆ.;
  • ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಅಂದರೆ ಮತ್ತೊಂದು ರಾಜ್ಯದ ಎಲ್ಲೆಯಲ್ಲಿರುವ ಒಂದು ರಾಜ್ಯದ ಅಣೆಕಟ್ಟೆ ವಿಚಾರದಲ್ಲಿ ರಾಷ್ಟ್ರೀಯ ಪ್ರಾಧಿಕಾರವು ರಾಜ್ಯ ಅಣೆಕಟ್ಟು ಸುರಕ್ಷತಾ ಸಂಸ್ಥೆಯ ಪಾತ್ರವನ್ನು ನಿರ್ವಹಿಸುತ್ತದೆ, ಆ ಮೂಲಕ ಅಂತರ ರಾಜ್ಯ ಸಂಘರ್ಷಗಳನ್ನು ನಿರ್ಮೂಲನೆ ಮಾಡುತ್ತದೆ.

ಅಣೆಕಟ್ಟೆ ಸುರಕ್ಷತೆ ಕುರಿತ ರಾಜ್ಯ ಸಮಿತಿ

 

  • ಇದು ರಾಜ್ಯದಲ್ಲಿರುವ ಎಲ್ಲ ನಿರ್ದಿಷ್ಟ ಅಣೆಕಟ್ಟೆಗಳ ಸೂಕ್ತ ನಿಗಾ, ಪರಿಶೀಲನೆ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಖಾತ್ರಿ ಒದಗಿಸುತ್ತದೆ ಮತ್ತು ಅವುಗಳ ಸುರಕ್ಷಿತ ಕಾರ್ಯಾಚರಣೆಯ ಖಾತ್ರಿ ನೀಡುತ್ತದೆ. ತರುವಾಯ ಇದು, ಎಲ್ಲ ರಾಜ್ಯಗಳಿಗೂ ‘ರಾಜ್ಯಗಳ ಅಣೆಕಟ್ಟೆ ಸುರಕ್ಷತಾ ಸಂಸ್ಥೆ’ ರಚನೆಗೆ ಅವಕಾಶ ಒದಗಿಸುತ್ತದೆ, ಇದನ್ನು ಅಣೆಕಟ್ಟು-ವಿನ್ಯಾಸಗಳು, ಜಲ-ಯಾಂತ್ರಿಕ ಇಂಜಿನಿಯರಿಂಗ್, ಜಲ ವಿಜ್ಞಾನ, ಭೂ-ತಾಂತ್ರಿಕ ಶೋಧನೆ, ಉಪಕರಣ ಮತ್ತು ಅಣೆಕಟ್ಟೆ-ಪುನರ್ವಸತಿ ಕ್ಷೇತ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳು ಅದರಲ್ಲೂ ಅಣೆಕಟ್ಟಿನ ಸುರಕ್ಷತೆಯ ಆದ್ಯತೆಯ ಅಧಿಕಾರಿಗಳು ನಿರ್ವಹಿಸುತ್ತಾರೆ.
  • ಭಾರತದಲ್ಲಿ 5200ಕ್ಕೂ ಹೆಚ್ಚು ದೊಡ್ಡ ಅಣೆಕಟ್ಟೆಗಳಿವೆ ಮತ್ತು 450 ನಿರ್ಮಾಣ ಹಂತದಲ್ಲಿವೆ. ಇದರ ಜೊತೆಗೆ ಸಾವಿರಾರು ಮಧ್ಯಮ ಮತ್ತು ಸಣ್ಣ ಅಣೆಕಟ್ಟೆಗಳಿವೆ. ಭಾರತದಲ್ಲಿ ಅಣೆಕಟ್ಟೆಗಳ ಸುರಕ್ಷತೆಗಾಗಿ ಕಾನೂನು ಮತ್ತು ಸಾಂಸ್ಥಿಕ ಸ್ವರೂಪದ ಕೊರತೆಯಿಂದ ಅಣೆಕಟ್ಟೆಗಳ ಸುರಕ್ಷತೆ ಕಾಳಜಿಯ ವಿಷಯವಾಗಿದೆ. ಅಸುರಕ್ಷಿತ ಅಣೆಕಟ್ಟೆಗಳು ಅಪಾಯಕಾರಿಯಾಗಿದ್ದು, ಅಣೆಕಟ್ಟೆ ಒಡೆದರೆ ಅದು ಅಪಾರ ಪ್ರಮಾಣದ ಜೀವಹಾನಿ ಮತ್ತು ಆಸ್ತಿ ಹಾನಿಗೆ ಕಾರಣವಾಗುತ್ತದೆ.
  • ಅಣೆಕಟ್ಟೆ ಸುರಕ್ಷತೆ ವಿಧೇಯಕ 2018, ಅಣೆಕಟ್ಟೆಗಳ ನಿಯಮಿತ ತಪಾಸಣೆ, ತುರ್ತು ಕ್ರಿಯಾ ಯೋಜನೆ, ಸಮಗ್ರ ಅಣೆಕಟ್ಟೆ ಸುರಕ್ಷತಾ ಪರಾಮರ್ಶೆ, ಸೂಕ್ತ ದುರಸ್ತಿ ಮತ್ತು ಅಣೆಕಟ್ಟೆ ಸುರಕ್ಷತೆಯ ನಿಧಿ ನಿರ್ವಹಣೆ, ಸುರಕ್ಷತೆಯ ಕೈಪಿಡಿ ಮತ್ತು ಉಪಕರಣ ಸೇರಿದಂತೆ ಅಣೆಕಟ್ಟೆಗಳ ಸುರಕ್ಷತೆಯ ಎಲ್ಲ ವಿಚಾರಗಳನ್ನೂ ನಿಭಾಯಿಸುತ್ತದೆ. ಇದು ಅಣೆಕಟ್ಟೆಯ ಮಾಲೀಕರ ಮೇಲೆ ಅಣೆಕಟ್ಟೆಯ ಸುರಕ್ಷತೆಯ ಮೇಲುಸ್ತುವಾರಿಯನ್ನು ಹೊರಿಸುತ್ತದೆ ಮತ್ತು ನಿರ್ದಿಷ್ಟ ಕ್ರಮಗಳಲ್ಲಿನ ತಪ್ಪು ಒಪ್ಪುಗಳಿಗೆ ದಂಡನೆಯ ಅವಕಾಶ ಒದಗಿಸುತ್ತದೆ.

 

3.ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯಿಂದ ಅಮೆರಿಕ ಹೊರಕ್ಕೆ

 

ಪ್ರಮುಖ ಸುದ್ದಿ

 

  • ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ಅಮೆರಿಕ ಹೊರಬಂದಿದೆ. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಬೂಟಾಟಿಕೆಯನ್ನು ಖಂಡಿಸಿರುವ ಅಮೆರಿಕ, ಇಂತಹ ಮನಸ್ಥಿತಿ ಹೊಂದಿರುವ ದೇಶಗಳಿಂದ ಇನ್ನು ಮುಂದೆ ಭಾಷಣ ಕೇಳುವುದಿಲ್ಲ ಎಂದು ತೀಕ್ಷ್ಣವಾಗಿ ಹೇಳಿದೆ.

 

ಮುಖ್ಯ ಅಂಶಗಳು 

  • ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿಯಾಗಿರುವ ನಿಕಿ ‌ಹ್ಯಾಲೆ ಅವರು ಈ ನಿರ್ಧಾರ ಪ್ರಕಟಿಸಿದರು. ಇಸ್ರೇಲ್ ಮೇಲೆ ಅತಿಯಾಗಿ ಗಮನ ಕೇಂದ್ರೀಕರಿಸುವುದು ಹಾಗೂ ನಿರಂತರವಾಗಿ ಅದನ್ನು ವಿರೋಧಿಸುವ ಮಂಡಳಿಯ ನಿಲುವನ್ನು ನಿಕಿ ಖಂಡಿಸಿದ್ದಾರೆ.

 

  • ಮಾನವ ಹಕ್ಕುಗಳ ಸಮಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರು ಸೇವೆಯಲ್ಲಿ ಮುಂದುವರಿದಿದ್ದಾರೆ. ಜೊತೆಗೆ ಸಮಿತಿಗೆ ನೇಮಕಗೊಳ್ಳುತ್ತಲೇ ಇದ್ದಾರೆ ಎಂದು ಅವರು ದೂರಿದ್ದಾರೆ.
  • ಜಗತ್ತಿನಲ್ಲಿ ಅಮಾನವೀಯ ಆಡಳಿತ ನೀಡಿದವರು ಪರಿಶೀಲನೆ ವೇಳೆ ತಪ್ಪಿಸಿಕೊಳ್ಳುತ್ತಿದ್ದಾರೆ. ಆದರೆ ಮಾನವ ಹಕ್ಕುಗಳ ಬಗ್ಗೆ ಉತ್ತಮ ನಡವಳಿಕೆಯ ತೋರಿದ ದೇಶಗಳನ್ನು ರಾಜಕೀಯವಾಗಿ ಬಲಿಪಶು ಮಾಡಲಾಗುತ್ತಿದೆ ಎಂದು ನಿಕಿ ಆರೋಪಿಸಿದ್ದಾರೆ.
  • ‘ಈ ವಿಚಾರದಲ್ಲಿ ಕಳೆದ ಒಂದು ವರ್ಷದಿಂದ ಯಾವುದೇ ಪ್ರಗತಿ ಕಾಣುತ್ತಿಲ್ಲ. ಹೀಗಾಗಿ ಮಂಡಳಿಯಿಂದ ಹೊರಬರುತ್ತಿದ್ದೇವೆ’ ಎಂದು ನಿರ್ಧಾರ ಪ್ರಕಟಿಸಿದ್ದಾರೆ.

 

ಅಮೆರಿಕದ ನಡೆಗೆ ಕಾರಣ ಏನು?

  • ಮೆಕ್ಸಿಕೊ ಗಡಿ ದಾಟಿ ಅಮೆರಿಕದ ಆಶ್ರಯ ಬಯಸಿ ಬರುತ್ತಿರುವ ಜನರ ಪೈಕಿ ಹೆತ್ತವರನ್ನು ಅವರ ಮಕ್ಕಳಿಂದ ಬೇರ್ಪಡಿಸುತ್ತಿರುವ ಕ್ರಮವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಅಧಿಕಾರಿಗಳು ಟೀಕಿಸಿದ್ದರು. ಹೀಗಾಗಿ ಮಂಡಳಿಯನ್ನೇ ತೊರೆಯುವ ನಿರ್ಧಾರವನ್ನು ಅಮೆರಿಕ ಪ್ರಕಟಿಸಿದೆ.
  • ಸಂಘಟನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸದಸ್ಯ ರಾಷ್ಟ್ರಗಳನ್ನು ವಜಾಗೊಳಿಸುವುದು ಹಾಗೂ ಮಂಡಳಿಯಲ್ಲಿ ಸುಧಾರಣೆ ತರಲು ಮಾಡಿದ ಸುದೀರ್ಘ ಯತ್ನಗಳು ವಿಫಲಗೊಂಡ ಕಾರಣ ಅಮೆರಿಕ ಈ ನಿರ್ಧಾರಕ್ಕೆ ಬಂದಿದೆ.
  • ಮಾನವ ಹಕ್ಕುಗಳ ಪರವಾಗಿ ಕೆಲಸ ಮಾಡಲು ಸುಧಾರಣೆ ಅತ್ಯಂತ ತುರ್ತಿನ ಕೆಲಸವಾಗಿತ್ತು. ಆದರೆ ಅದು ಕೈಗೂಡಲಿಲ್ಲ ಎಂದು ನಿಕಿ ಹ್ಯಾಲೆ ಹೇಳಿದ್ದಾರೆ.
  • ಪ್ಯಾಲೆಸ್ಟೀನ್‌ ವಿಚಾರದಲ್ಲಿ ಇಸ್ರೇಲ್ ನಡವಳಿಕೆ ಮೇಲೆ ಮಂಡಳಿಯು ಹೆಚ್ಚು ಗಮನ ಕೇಂದ್ರೀಕರಿಸುತ್ತಿದೆ ಎಂಬುದೂ ಅಮೆರಿಕದ ಈ ನಿರ್ಧಾರಕ್ಕೆ ಒಂದು ಕಾರಣ. ಇಸ್ರೇಲ್ ಬಗ್ಗೆ ಪಕ್ಷಪಾತ ಧೋರಣೆ ತಳೆದಿರುವುದನ್ನು ಒಪ್ಪಲಾಗದು ಎಂದು ಹೇಳಿದ್ದಾರೆ.
  • ಮಂಡಳಿ ಸ್ಥಾಪನೆಯಾದಂದಿನಿಂದ ಇಸ್ರೇಲ್ ನಿಲುವು ಖಂಡಿಸಿ ನಿರ್ಣಯ ಕೈಗೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ.

 

4.ಈಶಾನ್ಯ ಮಂಡಳಿಯ ಪುನರ್ ಸ್ಥಾಪನೆಗೆ ಸಂಪುಟದ ಅನುಮೋದನೆ

ಪ್ರಮುಖ ಸುದ್ದಿ

 

  • ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಕೇಂದ್ರ ಗೃಹ ಸಚಿವರನ್ನು ಎಲ್ಲ 8 ಈಶಾನ್ಯ ಸದಸ್ಯ ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳನ್ನು ಒಳಗೊಂಡ ಶಾಸನಾತ್ಮಕ ಕಾಯವಾದ- ಈಶಾನ್ಯ ಮಂಡಳಿ  (ಎನ್.ಇ.ಸಿ.)ಯ ಪದನಿಮಿತ್ತ ಅಧ್ಯಕ್ಷರನ್ನಾಗಿ ನಾಮಾಂಕನ ಮಾಡುವ ಈಶಾನ್ಯ ವಲಯ ಅಭಿವೃದ್ಧಿ ಸಚಿವಾಲಯ (ಡಿ.ಓ.ಎನ್.ಇ.ಆರ್.)ನ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ. ಈಶಾನ್ಯ ವಲಯ ಅಭಿವೃದ್ಧಿ ಸಚಿವಾಲಯದ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುವ ಪ್ರಸ್ತಾಪಕ್ಕೂ ಸಂಪುಟ ತನ್ನ ಅನುಮೋದನೆ ನೀಡಿದೆ.

 

ಮುಖ್ಯ ಅಂಶಗಳು

ಇದರಿಂದ ಆಗುವ ಪರಿಣಾಮಗಳೇನು ?

 

  • ಎನ್.ಇ.ಸಿ. ಕೇಂದ್ರ ಮತ್ತು ರಾಜ್ಯದ ಸಂಸ್ಥೆಗಳ ಮೂಲಕ ವಿವಿಧ ಯೋಜನೆಗಳನ್ನು ಜಾರಿ ಮಾಡುತ್ತದೆ. ಗೃಹ ಸಚಿವರು ಅಧ್ಯಕ್ಷರಾಗಿ ಮತ್ತು ಡಿಓಎನ್ಇಆರ್ ಸಚಿವರು ಉಪಾಧ್ಯಕ್ಷರಾಗುವ ಹೊಸ ವ್ಯವಸ್ಥೆಯ ಅಡಿಯಲ್ಲಿ, ಎನ್.ಇಸಿ ಮತ್ತು ಎಲ್ಲ ಈಶಾನ್ಯ ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಸದಸ್ಯರಾಗಿ, ಹೆಚ್ಚು ಸಮಗ್ರವಾಗಿ ಅಂತರ ರಾಜ್ಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ವೇದಿಕೆಯನ್ನು ಕಲ್ಪಿಸುತ್ತದೆ ಮತ್ತು ಭವಿಷ್ಯದಲ್ಲಿ ಸಮಾನ ದೃಷ್ಟಿಕೋನದ ಪರಿಗಣನೆಗೆ ಅವಕಾಶ ನೀಡುತ್ತದೆ.

 

  • ಅಂತರ ರಾಜ್ಯ ಸಮಸ್ಯೆಗಳಾದ ಮಾದಕ ವಸ್ತು ಕಳ್ಳಸಾಗಣೆ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಕಳ್ಳಸಾಗಣೆ ಹಾಗೂ ಗಡಿ ವಿವಾದ ಇತ್ಯಾದಿಗಳ ಕುರಿತು ವಿವಿಧ ವಲಯ ಮಂಡಳಿಗಳು ಕೈಗೊಂಡಿರುವ ಸವಾಲನ್ನೂ ಎನ್.ಇ.ಸಿ. ಈಗ ನಿಭಾಯಿಸಬಹುದಾಗಿದೆ. ಎನ್.ಇ.ಸಿ.ಯ ಈ ಮರು ಸ್ಥಾಪನೆಯು ಈಶಾನ್ಯ ವಲಯದ ಸಮರ್ಥ ಕಾಯವಾಗಿ ಹೊರಹೊಮ್ಮಲು ನೆರವಾಗಲಿದೆ.

 

  • ಕಾಲ ಕಾಲಕ್ಕೆ ಮಂಡಳಿಯು ಯೋಜನೆಗಳಲ್ಲಿ ಸೇರಿದ ಯೋಜನೆ/ಕಾರ್ಯಕ್ರಮಗಳ ಅನುಷ್ಠಾನದ ಪರಾಮರ್ಶೆ ನಡೆಸುತ್ತದೆ ಮತ್ತು ರಾಜ್ಯ ಸರ್ಕಾರಗಳ ನಡುವೆ ಈ ಯೋಜನೆಗಳಿಗೆ ಸಂಬಂಧಿಸಿದಂತೆ ಸಮನ್ವಯತೆಗೆ ಸಮರ್ಥವಾದ ಕ್ರಮಗಳನ್ನು ಶಿಫಾರಸು ಮಾಡುತ್ತದೆ. ಕೇಂದ್ರ ಸರ್ಕಾರದಿಂದ ಮಂಡಳಿಗೆ ಇಂಥ ಅಧಿಕಾರವನ್ನು ನೀಡಿದೆ.

BACK TO BASICS

 

ಈಶಾನ್ಯ ಮಂಡಳಿ ಬಗ್ಗೆ

  • ಎನ್.ಇ.ಸಿ.ಯನ್ನು ಸಮತೋಲಿತ ಮತ್ತು ಸಮನ್ವಯತೆಯ ಅಭಿವೃದ್ಧಿಯ ಖಾತ್ರಿಗಾಗಿ ಮತ್ತು ರಾಜ್ಯಗಳ ನಡುವೆ ಸಮನ್ವಯತೆಗಾಗಿ ಉನ್ನತ ಮಟ್ಟದ ಕಾಯವಾಗಿ ಈಶಾನ್ಯ ವಲಯ ಮಂಡಳಿ ಕಾಯಿದೆ 1971ರ ಅಡಿಯಲ್ಲಿ ಸ್ಥಾಪಿಸಲಾಗಿದೆ.
  • 2002ರಲ್ಲಿ ತರಲಾದ ತಿದ್ದುಪಡಿಯನ್ವಯ, ಎನ್.ಇ.ಸಿ. ಈಶಾನ್ಯ ಪ್ರದೇಶಗಳ ಪ್ರಾದೇಶಿಕ ಯೋಜನಾ ಕಾಯವಾಗಿ ಕಾರ್ಯನಿರ್ವಹಿಸುವುದು ಕಡ್ಡಾಯವಾಗಿದೆ ಮತ್ತು ಈ ಪ್ರದೇಶಗಳಿಗೆ ಪ್ರಾದೇಶಿಕ ಯೋಜನೆ ರೂಪಿಸುವಾಗ, ಎರಡು ಅಥವಾ ಹೆಚ್ಚಿನ ರಾಜ್ಯಗಳಿಗೆ ಲಾಭವಾಗುವಂಥ ಯೋಜನೆ ಮತ್ತು ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕಾಗಿದೆ ಮತ್ತು ಸಿಕ್ಕಿಂ ವಿಚಾರದಲ್ಲಿ ಮಂಡಳಿಯು ಆ ರಾಜ್ಯಕ್ಕೆ ನಿರ್ದಿಷ್ಟ ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ.

 

5.ರಾಷ್ಟ್ರೀಯ ಡಿಜಿಟಲ್ ಲೈಬ್ರರಿಗೆ ಕೇಂದ್ರ ಸರಕಾರ ಚಾಲನೆ

 

ಪ್ರಮುಖ ಸುದ್ದಿ

 

  • ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ವು ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾಕ್ಕೆ (ಎನ್‌ಡಿಎಲ್‌ಐ) ಚಾಲನೆ ನೀಡಿದೆ.

ಮುಖ್ಯ ಅಂಶಗಳು

  • ರಾಷ್ಟ್ರೀಯ ಓದುವಿಕೆ ದಿನಾಚರಣೆ ಅಂಗವಾಗಿ ನವದೆಹಲಿಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್‌ ಇದಕ್ಕೆ ಚಾಲನೆ ನೀಡಿದರು. ಇದನ್ನು ಐಐಟಿ ಖರಗಪುರ ಅಭಿವೃದ್ಧಿಪಡಿಸಿದೆ.
  • ಇದರಲ್ಲಿ ಪಠ್ಯಪುಸ್ತಕಗಳು, ಲೇಖನಗಳು, ವಿಡಿಯೋ, ಆಡಿಯೋ ಬುಕ್ ಮತ್ತು ವೈಜ್ಞಾನಿಕ ಪುಸ್ತಕಗಳು ಸೇರಿ 200 ಭಾಷೆಗಳ ಒಟ್ಟು 35 ಲಕ್ಷ ಇ-ಬುಕ್‌ಗಳಿವೆ. ‘ಪಡೆ ಭಾರತ್ ಬಡೇ ಭಾರತ್’ ಪರಿಕಲ್ಪನೆಯಡಿ ಇದನ್ನು ಆರಂಭಿಸಲಾಗಿದೆ.
  • ಯಾರು ಎಲ್ಲಿ ಬೇಕಾದರೂ ಉಚಿತವಾಗಿ ಇ-ಪುಸ್ತಕಗಳನ್ನು ಬಳಸಿಕೊಳ್ಳಬಹುದು. ವೆಬ್‌ಸೈಟ್ ಮಾತ್ರವಲ್ಲದೆ ಎನ್‌ಡಿಎಲ್‌ಐ ಮೊಬೈಲ್ ಆ್ಯಪ್ ಕೂಡಾ ಲಭ್ಯವಿದೆ. ಐಫೋನ್ ಮತ್ತು ಆಂಡ್ರಾಯ್ ಬಳಕೆದಾರರೂ ಡೌನ್ ಲೋಡ್ ಮಾಡಿಕೊಳ್ಳಬಹುದು. ಸದ್ಯ ಮೊಬೈಲ್ ಆ್ಯಪ್‌ನಲ್ಲಿ ಇಂಗ್ಲಿಷ್, ಹಿಂದಿ ಮತ್ತು ಬಂಗಾಳಿ ಭಾಷೆಯ ಪುಸ್ತಕಗಳಷ್ಟೇ ಲಭ್ಯವಿವೆ.

 

6.ಗಡಿಯಲ್ಲಿ ಉಗ್ರರು ನುಸುಳಿದರೇ ಹೊಡೆದುರುಳಿಸಲು ಭಾರತೀಯ ಸ್ನಿಪರ್ ಪಡೆ

 ಪ್ರಮುಖ ಸುದ್ದಿ

 

  • ಭಾರತವು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಗಡಿ ಭದ್ರತಾ ಪಡೆಯ (ಬಿ ಎಸ್ ಪಿ) ಸ್ನಿಪರ್ ಪಡೆ ನಿಯೋಜಿಸಿದೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಗಡಿಯ ಮೂಲಕ ಉಗ್ರರ ಒಳ ನುಸುಳುವಿಕೆ ಹೆಚ್ಚಾಗುತ್ತಿದ್ದು ಅದನ್ನು ಸಮರ್ಥವಾಗಿ ಎದುರಿಸಲು ಈ ಯೋಜನೆ ರೂಪಿಸಲಾಗಿದೆ.
  • ಅಮರನಾಥ ಯಾತ್ರೆ ವೇಳೆ ದಾಳಿ ನಡೆಸುವ ಉದ್ದೇಶದಿಂದ ನೂರಾರು ಉಗ್ರರು ಗಡಿಯಲ್ಲಿ ನುಸುಳಲು ಸಜ್ಜಾಗಿದ್ದಾರೆ ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಸ್ನಿಪರ್ ಪಡೆಯನ್ನು ಗಡಿಯ ವಿವಿಧ ಭಾಗದಲ್ಲಿ ನಿಯೋಜಿಸಲಾಗಿದೆ.

 

ಮುಖ್ಯ ಅಂಶಗಳು

ಏನಿದು ಸ್ವೀಪರ್ ಪಡೆ ?:

 

  • ವಾತಾವರಣಕ್ಕೆ ತಕ್ಕಂತೆ ವೇಷಭೂಷಣ ಧರಿಸಿ ವಾತಾವರಣದಲ್ಲಿಯೇ ‘ವಿಲೀನವಾಗಿ ಶತ್ರುಪಾಳಯದ ಚಲನವಲನವನ್ನು ಗಮನಿಸಿ ದಾಳಿ ನಡೆಸುವ ಪಡೆ ಇದು.

ವಿಶೇಷ ತರಬೇತಿ:

 

  • ಸ್ನಿಪರ್ ಪಡೆಯ ಸದಸ್ಯರಿಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಸೆಂಟ್ರಲ್ ಸ್ಕೂಲ್ ಆಫ್ ವೆಪನ್ ಆ್ಯಂಡ್ ಟ್ಯಾಕ್ಟಿಕ್ಸ್ ಕೇಂದ್ರದಲ್ಲಿ ಕಠಿಣ ತರಬೇತಿ ನೀಡಲಾಗುತ್ತದೆ. ತರಬೇತಿಯಲ್ಲಿ ಭಾಗಿಯಾದ ನೂರು ಯೋಧರಲ್ಲಿ ಒಬ್ಬರನ್ನು ಮಾತ್ರ ಸ್ನಿಪರ್ ಪಡೆಗೆ ಆಯ್ಕೆ ಮಾಡಲಾಗುತ್ತದೆ.ಆಯ್ಕೆಯಾದ ಯೋಧರಿಗೆ ಸುಮಾರು 60 ದಿನಗಳ ವಿಶೇಷ ತರಬೇತಿ ನೀಡಲಾಗುತ್ತದೆ.

 

ಕಾರ್ಯಚರಣೆ ಹೇಗೆ ?:

 

  • ಉಗ್ರರು ಒಳನುಸುಳುವ ಪ್ರದೇಶವನ್ನು ಮೊದಲು ಗುರುತಿಸಲಾಗುತ್ತದೆ. ಈ ಪ್ರದೇಶದ ಮೇಲೆ ನಿಗಾ ಇಡಲು ಸಮೀಪದಲ್ಲೇ ಇನ್ನೊಂದು ಜಾಗವನ್ನು ಸ್ನಿಪರ್ ಪಡೆ ಆಯ್ಕೆ ಮಾಡಿಕೊಳ್ಳುತ್ತದೆ. ಈ ಜಾಗದಲ್ಲಿ ಅವಿತುಕೊಂಡು ಉಗ್ರರ ಚಲನವಲನದ ಮೇಲೆ ಕಣ್ಣಿಡಲಾಗುತ್ತದೆ. ಯಾವುದೇ ವಾತಾವರಣ, ಸ್ಥಳದಲ್ಲಿ ಬೇಕಾದರೂ ಈ ಪಡೆ ಕಾರ್ಯನಿರ್ವಹಿಸುತ್ತದೆ.

ಸ್ನಿಪರ್ ಕ್ರಮ ಯಾಕೆ ?:

 

  • ಕಾಶ್ಮೀರದ ಸುಂದರ್‌ಬನಿ ಪ್ರದೇಶದಲ್ಲಿ ಇತ್ತೀಚೆಗೆ ಪಾಕಿಸ್ತಾನ ಸೇನೆಯ ಸ್ನಿಪರ್ ಪಡೆ ಭಾರತದ ಬಿಎಸ್ಎಫ್ ಸಬ್‌ಇನ್ಸ್‌ ಪೆಕ್ಟರ್‌ ಎಸ್.ಎನ್, ಯಾದವ್ ಹಾಗೂ ಕಾನ್‌ಸ್ಟೇಬಲ್ ವಿ ಪಾಂಡೆಯನ್ನು ಹತ್ಯೆಗೈದಿತ್ತು. ಹೀಗಾಗಿ ಭಾರತವೂ ಸ್ನಿಪರ್ ಪಡೆಯನ್ನು ನಿಯೋಜಿಸಿದೆ.

7.ರಾಷ್ಟ್ರೀಯ ಪರೀಕ್ಷಾ ಸಂಸ್ಥೆ- ಎನ್‌ಟಿಎ

 

ಪ್ರಮುಖ ಸುದ್ದಿ 

 

  • ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ) ನಡೆಸುತ್ತಿದ್ದ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಪರೀಕ್ಷೆಗಳನ್ನು ಇನ್ನು ಮುಂದೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸಲಿದೆ.

ಮುಖ್ಯ ಅಂಶಗಳು

  • ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು (ಎನ್‌ಟಿಎ) ಸ್ಥಾಪಿಸುವ ನಿರ್ಧಾರಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಎನ್‌ಟಿಎ 2019ರಿಂದ ಕಾರ್ಯಾರಂಭ ಮಾಡಲಿದೆ ಎಂದು ಸಚಿವಾಲಯ ತಿಳಿಸಿದೆ.
  • ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ‘1860ರ ಸೊಸೈಟಿ ನೋಂದಣಿ ಕಾಯ್ದೆ ಅಡಿ ಎನ್‌ಟಿಎಯನ್ನು ಸ್ಥಾಪಿಸಲಾಗುತ್ತದೆ. ಸರ್ಕಾರ ಒಂದು ಬಾರಿಯ ಧನ ಸಹಾಯವಾಗಿ ಎನ್‌ಟಿಎಗೆ 25 ಕೋಟಿ ನೀಡಲಿದೆ. ಸಂಸ್ಥೆ ಸ್ವಾಯತ್ತವಾಗಿ ಕಾರ್ಯನಿರ್ವಹಿಸಲಿದೆ’ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
  • ಸದ್ಯ ಐಐಟಿಗಳ ಪ್ರವೇಶಕ್ಕೆ ನಡೆಸುವ ಜಂಟಿ ಪ್ರವೇಶ ಮುಖ್ಯ ಪರೀಕ್ಷೆ (ಜೆಇಇ) ಮತ್ತು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಅನ್ನು ಕಳೆದ ಕೆಲವು ವರ್ಷಗಳಿಂದ ಕೇಂದ್ರ ಪ್ರೌಢ ಶಿಕ್ಷಣಾ ಮಂಡಳಿ (ಸಿಬಿಎಸ್‌ಇ) ಆಯೋಜಿಸುತ್ತಿದೆ.
  • ತನ್ನ ಅಧೀನದಲ್ಲಿರುವ 18,000 ಶಾಲೆಗಳ ನಿರ್ವಹಣೆ-ಮೇಲ್ವಿಚಾರಣೆಗೆ ಅಡಚಣೆಯಾಗುತ್ತಿದೆ. ಹೀಗಾಗಿ ಈ ಪರೀಕ್ಷೆಗಳ ಹೊಣೆಯಿಂದ ಬಿಡುಗಡೆ ಮಾಡಬೇಕು ಎಂದುಕೇಂದ್ರ ಸರ್ಕಾರಕ್ಕೆ ಸಿಬಿಎಸ್‌ಇ ಮನವಿ ಸಲ್ಲಿಸಿತ್ತು. ‘
  • ಎನ್‌ಟಿಎ 2019ರಿಂದ ಕಾರ್ಯಾರಂಭ ಮಾಡಲಿದೆ. ಸಿಬಿಎಸ್‌ಇ ಆಯೋಜಿಸುತ್ತಿರುವ ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳನ್ನು ಎನ್‌ಟಿಎ ನಡೆಸಲಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ನಡೆಸುವ ಪರೀಕ್ಷೆಗಳ ಜವಾಬ್ದಾರಿಯನ್ನೂ ನಂತರದ ದಿನಗಳಲ್ಲಿ ಎನ್‌ಟಿಎ ವಹಿಸಿಕೊಳ್ಳಲಿದೆ. ಪರೀಕ್ಷೆಗಳ ವಿಶ್ವಾಸಾರ್ಹತೆ ಮತ್ತು ಪರೀಕ್ಷಾ ಪ್ರಕ್ರಿಯೆನ್ನು ಸಂಸ್ಥೆ ಸುಧಾರಿಸಲಿದೆ’

 

 

Share