5th DECEMBER-DAILY CURRENT AFFAIRS BRIEF

 

  5th DECEMBER

 

1.ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಕ( National drug pricing regulator)

ಸನ್ನಿವೇಶ

  • ಒಟ್ಟು 51 ಅತಿ ಪ್ರಮುಖ ಔಷಧಗಳ ಬೆಲೆಯನ್ನು ರಾಷ್ಟ್ರೀಯ ಔಷಧ ದರ ನಿಯಂತ್ರಕ ಎನ್‌ಪಿಪಿಎ ಇಳಿಕೆ ಮಾಡಿದೆ.
  • ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ, ನೋವು, ಹೃದಯ ಚಿಕಿತ್ಸೆ, ಚರ್ಮ ಸಮಸ್ಯೆಗಳಿಗೆ ಬಳಸುವ ಔಷಧಗಳ ದರಗಳನ್ನು ಇಳಿಕೆ ಮಾಡಲಾಗಿದೆ.ಶೇ.6ರಿಂದ ಶೇ.53ರಷ್ಟು ಪ್ರಮಾಣದಲ್ಲಿ ಔಷಧಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ ಎಂದು ಎನ್‌ಪಿಪಿಎ ಹೇಳಿಕೆನೀಡಿದೆ .

 

ರಾಷ್ಟ್ರೀಯ ಔಷಧ ದರ ನಿಗದಿ ಪ್ರಾಧಿಕಾರದ ಬಗ್ಗೆ

  • ರಾಷ್ಟ್ರೀಯ ಔಷಧ ದರ ನಿಗದಿ ಪ್ರಾಧಿಕಾರವು ದೇಶದಲ್ಲಿ ಔಷಧಿ ಉತ್ಪನ್ನಗಳ ದರಗಳನ್ನು ನಿಯಂತ್ರಿಸುವ ಸ್ವಾಯತತೆ ಸಂಸ್ಥೆಯಾಗಿದ್ದು, ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿದೆ.
  • ಔಷಧ ನೀತಿ, ಔಷಧಿಗಳ ದರ ನಿಗದಿ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಲಹೆ/ಸೂಚನೆ ನೀಡುವುದು ಪ್ರಾಧಿಕಾರದ ಕರ್ತವ್ಯ.
  • ಇದನ್ನು 1995 ರ ಡ್ರಗ್ಸ್ -ಬೆಲೆ ನಿಯಂತ್ರಣ ಆದೇಶದ ಅಡಿಯಲ್ಲಿ, ಸ್ಥಾಪಿಸಲಾಗಿದೆ .

 

  1. ಎಸ್‌ಬಿಐನ ಯೊನೊಆ್ಯಪ್‌ಗೆ ಚಾಲನೆ

 ಪ್ರಮುಖ ಸುದ್ದಿ

  • ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಪರಿಚಯಿಸಿರುವ ಸಮಗ್ರ ಡಿಜಿಟಲ್‌ ಸೇವೆಗಳ ಹೊಸ ಕಿರುತಂತ್ರಾಂಶ (ಆ್ಯಪ್‌) ‘ಯೊನೊ’ಗೆ (You Only Need One–YONO) ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಚಾಲನೆ ನೀಡಿದರು.

ಯೊನೊಆ್ಯಪ್‌ ಬಗ್ಗೆ

  • ಹಣಕಾಸು ಸೇವೆಗಳು ಮತ್ತು ಜೀವನಶೈಲಿಯ ಸೇವೆ ಮತ್ತು ಉತ್ಪನ್ನಗಳು ಒಂದೇ ತಾಣದಲ್ಲಿ ದೊರೆಯುವ ವಿಶಿಷ್ಟ ಆ್ಯಪ್‌ ಇದಾಗಿದೆ. ಬ್ಯಾಂಕಿಂಗ್‌ ಮತ್ತು ಹಣಕಾಸು ಸೇವೆಗಳ ಜತೆಗೆ ಜೀವನಶೈಲಿಯ 14 ವಿವಿಧ ಬಗೆಯ ಸೌಲಭ್ಯಗಳನ್ನೂ ಇಲ್ಲಿ ಪಡೆಯಬಹುದು.
  • ಕ್ಯಾಬ್‌ ಬುಕಿಂಗ್‌, ಸಿನಿಮಾ, ಬಸ್‌, ರೈಲು ಟಿಕೆಟ್‌ ಖರೀದಿ, ಹೋಟೆಲ್‌ ಕೋಣೆ ಮುಂಗಡ ಕಾದಿರಿಸುವಿಕೆ ಜತೆಗೆ ವೈದ್ಯಕೀಯ ಸೇವೆಗಳು ಇಲ್ಲಿ ಲಭ್ಯ. ಐದು ನಿಮಿಷಗಳಲ್ಲಿ ಎಸ್‌ಬಿಐ ಬ್ಯಾಂಕ್‌ ಖಾತೆಯನ್ನೂ ತೆರೆಯಬಹುದಾಗಿದೆ.
  • ಅಮೆಜಾನ್‌, ಮಿಂತ್ರಾ, ಜಬಾಂಗ್, ಷಾಪರ್ಸ್‌ ಸ್ಟಾಪ್‌, ಯಾತ್ರಾ ಸೇರಿದಂತೆ 60ಕ್ಕೂ ಹೆಚ್ಚು ಇ–ಕಾಮರ್ಸ್‌ ಸಂಸ್ಥೆಗಳ ಜತೆ ಎಸ್‌ಬಿಐ ಒಪ್ಪಂದ ಮಾಡಿಕೊಂಡಿದ್ದು, ಈ ಆ್ಯಪ್‌ ಮೂಲಕ ಸರಕು ಖರೀದಿಗೆ ಆಕರ್ಷಕ ಕೊಡುಗೆಗಳೂ ಇರಲಿವೆ.

 

3.2022ರ ಒಳಗೆ ಅಪೌಷ್ಟಿಕತೆ  ನೀಗಿಸಿ:  ಪ್ರಧಾನಿ

ಪ್ರಮುಖ ಸುದ್ದಿ

  • ಭಾರತವು 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಿರುವ 2022ರ ವೇಳೆಗೆ ಮಕ್ಕಳಲ್ಲಿ ಕಂಡು ಬರುವ ಕುಂಠಿತ ಬೆಳವಣಿಗೆ, ಪೌಷ್ಟಿಕಾಂಶದ ಕೊರತೆ, ಕಡಿಮೆ ತೂಕ ಮತ್ತು ಅನೀಮಿಯಾಗಳ ತಡೆ ಮತ್ತು ನಿಯಂತ್ರಣದಲ್ಲಿ ಕಣ್ಣಿಗೆ ಕಾಣುವಂತಹ ಗಣನೀಯ ಫಲಿತಾಂಶ ಬರುವಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
  • ಪ್ರಧಾನಿ ಕಚೇರಿ ಅಧಿಕಾರಿಗಳು, ನೀತಿ ಆಯೋಗ ಮತ್ತು ವಿವಿಧ ಸಚಿವಾಲಯಗಳು ಭಾಗವಹಿಸಿದ್ದ ಪರಿಶೀಲನಾ ಸಭೆಯಲ್ಲಿ ಮೋದಿ ಈ ಸೂಚನೆ ನೀಡಿದ್ದಾರೆ.
  • ಪೌಷ್ಟಿಕಾಂಶದ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಪರಿಣಾಮ ಬೀರುವಂತಹ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ಯೋಜನೆಗಳನ್ನು ಒಟ್ಟುಗೂಡಿಸಲು ಅವರು ಕರೆ ನೀಡಿದ್ದಾರೆ. ಜೊತೆಗೆ, ಪೌಷ್ಟಿಕಾಂಶದ ಮಹತ್ವದ ಬಗ್ಗೆ ಸಾಮಾಜಿಕ ಜಾಗೃತಿಯನ್ನು ಹೆಚ್ಚಿಸಬೇಕು ಎಂದಿದ್ದಾರೆ.

 

 

  1. ಹಿಂದೂಸ್ತಾನ್ ತರಕಾರಿ ತೈಲ ನಿಗಮ ನಿಯಮಿತ

ಪ್ರಮುಖ ಸುದ್ದಿ

 

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಹಿಂದೂಸ್ತಾನ್ ತರಕಾರಿ ತೈಲ ನಿಗಮ ನಿಯಮಿತ (ಎಚ್.ವಿ.ಓ.ಸಿ.) ಹೊಂದಿರುವ ಎಲ್ಲ ಜಮೀನು ಆಸ್ತಿಯನ್ನು ಸೂಕ್ತ ಬಳಕೆ/ವಿಲೇವಾರಿಗಾಗಿ ವಸತಿ ಮತ್ತು ನಗರ ವ್ಯವಹಾರಗಳ (ಎಂ.ಓ. ಎಚ್.ಯು.ಎ.)ಗೆ ಅಥವಾ ಅದರ ಅಧಿಕೃತ ಸಂಸ್ಥೆಗಳಿಗೆ ವರ್ಗಾವಣೆ ಮಾಡಲು ತನ್ನ ಸಮ್ಮತಿ ಸೂಚಿಸಿದೆ.

 

ಮುಖ್ಯ ಅಂಶಗಳು

 

  • ಎಚ್.ವಿ.ಓ.ಸಿ.ಯ ಈ ಜಮೀನು ಆಸ್ತಿಗಳ ವರ್ಗಾವಣೆಯ ಬದಲಿಗೆ, ಎಚ್.ವಿ.ಓ.ಸಿ. ಸರ್ಕಾರದಿಂದ ಪಡೆದಿರುವ ಸಾಲದ ಮೇಲಿನ ಬಡ್ಡಿ ಮತ್ತು ಸಂಪೂರ್ಣ ಸಾಲವನ್ನು ಮನ್ನಾ ಮಾಡಲಾಗುತ್ತದೆ.
  • ಅಲ್ಲದೆ ವಿವಿಧ ನ್ಯಾಯಾಲಯಗಳಲ್ಲಿ/ನ್ಯಾಯಾಧಿಕರಣಗಳಲ್ಲಿ/ಪ್ರಾಧಿಕಾರಗಳಲ್ಲಿ ಬಾಕಿ ಇರುವ ಪ್ರಕರಣಗಳಿಂದಾಗಿ ಉದ್ಭವಿಸಬಹುದಾದ ಎಚ್.ವಿ.ಓ.ಸಿ.ಯ ಎಲ್ಲ ಸಂಭವನೀಯ ಹೊಣೆಯನ್ನೂ ಸರ್ಕಾರ ಹೊರುತ್ತದೆ.

 

  • ಏಳು ನಗರಗಳಲ್ಲಿ ಇರುವ ಜಮೀನು ಹಲವು ವರ್ಷಗಳಿಂದ ಬಳಕೆಯಾಗದೆ ಬಿದ್ದಿದೆ. ಎಂ.ಓ.ಎಚ್.ಯು.ಎಗೆ ಈ ಆಸ್ತಿಗಳನ್ನು ವರ್ಗಾವಣೆ ಮಾಡುವುದರಿಂದ ಇದನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಕೆ ಮಾಡಲು ಅವಕಾಶ ಆಗಲಿದೆ.
  • ದಿವಾಳಿಯ ಅಡಿಯಲ್ಲಿರುವ, ರೋಗಗ್ರಸ್ಥ ಪಿ.ಎಸ್.ಯು ಆದ ಎಚ್.ವಿ.ಓ.ಸಿ.ಯನ್ನು ಮುಂಚಿತವಾಗಿ ಮುಚ್ಚಲೂ ಇದು ಅವಕಾಶ ಮಾಡಿಕೊಡುತ್ತದೆ.

 

  1. ಭಾರತ ಮತ್ತು ಬ್ರೆಜಿಲ್ ನಡುವೆ ಹೂಡಿಕೆಯ ಸಹಕಾರ ಮತ್ತು ಅದನ್ನು ಸುಗಮಗೊಳಿಸುವ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಮುಖ ಸುದ್ದಿ 

 

  • ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಬ್ರೆಜಿಲ್ ನಡುವೆ ಹೂಡಿಕೆಯ ಸಹಕಾರ ಮತ್ತು ಅದನ್ನು ಸುಗಮಗೊಳಿಸುವ ಒಪ್ಪಂದಕ್ಕೆ (ಐಸಿಎಫ್ಟಿ) ತನ್ನ ಅನುಮೋದನೆ ನೀಡಿದೆ.

ಪ್ರಮುಖ ಸಂಗತಿಗಳು

 

  • ಈ ಒಪ್ಪಂದ ಫಲವಾಗಿ ಎರಡೂ ದೇಶಗಳ ನಡುವೆ ಹೂಡಿಕೆಯ ಹರಿವು ಹೆಚ್ಚಿಸಲಿದೆ. ಭಾರತ ಮತ್ತು ಬ್ರೆಜಿಲ್ ನಡುವಿನ ಐಸಿಎಫ್ಟಿ ಬ್ರೆಜಿಲ್ ನ ಹೂಡಿಕೆದಾರರಿಗೆ ಭಾರತದಲ್ಲಿ ಮತ್ತು ಭಾರತದ ಹೂಡಿಕೆದಾರರಿಗೆ ಬ್ರೆಜಿಲ್ ನಲ್ಲಿ ಸುಗಮ ಅವಕಾಶ ಒದಗಿಸುತ್ತದೆ.
  • ಇದು ಎಲ್ಲಾ ಹೂಡಿಕೆಯ ಸೌಕರ್ಯ ವಿಷಯಗಳಲ್ಲಿ ತಾರತಮ್ಯವಿಲ್ಲದ ಮತ್ತು ಉತ್ತಮ ಭೂಮಿಕೆಯನ್ನು ಒದಗಿಸುವುದರ ಮೂಲಕ ಹೂಡಿಕೆದಾರರಿಗೆ ಅನುಕೂಲಕರ ಹೂಡಿಕೆ ವಾತಾವರಣವನ್ನು ಖಾತ್ರಿಪಡಿಸಿ, ಸೌಕರ್ಯ ಮಟ್ಟವನ್ನು ಮತ್ತು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುವ ನಿರೀಕ್ಷೆ ಇದೆ.
  • ಇದು ಬ್ರೆಜಿಲ್ ಹೂಡಿಕೆದಾರರಿಗೆ ಭಾರತವನ್ನು ಸೂಕ್ತ ವಿದೇಶಿ ನೇರ ಬಂಡವಾಳ (ಎಫ್.ಡಿ.ಐ)ಹೂಡಿಕೆ ತಾಣ ಎಂದು ಬಿಂಬಿಸಲೂ ನೆರವಾಗುತ್ತದೆ.

 

  1. ಸಣ್ಣ ರೈತರ ಕೃಷಿ ವಹಿವಾಟು ಒಕ್ಕೂಟದ ಸಭೆ

 

ಪ್ರಮುಖ ಸುದ್ದಿ

  • ಇತ್ತೀಚಿಗೆ ನವದೆಹಲಿಯಲ್ಲಿ ಸಣ್ಣ ರೈತರ ಕೃಷಿ ವಹಿವಾಟು ಒಕ್ಕೂಟದ 22ನೇ ಆಡಳಿತ ಮಂಡಳಿ ಸಭೆ   ನಡೆಯಿತು. 

 

ಸಣ್ಣ ರೈತರ ಕೃಷಿ ವಹಿವಾಟು ಒಕ್ಕೂಟ   ಬಗ್ಗೆ

  • ಸಣ್ಣ ರೈತರ ಕೃಷಿ ವಹಿವಾಟು ಒಕ್ಕೂಟವು ಕೇಂದ್ರ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಸಚಿವಾಲಯ ಪ್ರವರ್ತಿತ ಸೊಸೈಟಿಯಾಗಿದೆ. ಇದು 1994ರಲ್ಲಿ ಆರಂಭವಾಗಿದ್ದು, ಸೊಸೈಟಿಗಳ ನೋಂದಣಿ ಕಾಯ್ದೆ- 1860ರಡಿ ಇದು ನೋಂದಣಿಯಾಗಿದೆ.
  • ಇದು ಬ್ಯಾಂಕೇತರ ಹಣಕಸು ಸಂಸ್ಥೆಯಾಗಿ ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ನೋಂದಣಿಯಾಗಿದೆ.
  • ಇದು ರೈತರ ಉತ್ಪಾದಕ ಸಂಘಗಳನ್ನು ಉತ್ಥೇಜಿಸುವ ಹಾಗೂ ಇವನ್ನು ಕೃಷಿ ಮೌಲ್ಯ ಸರಣಿಯಲ್ಲಿ ಸಮನ್ವಯಗೊಳಿಸುವ ಕಾರ್ಯವನ್ನೂ ಮಾಡುತ್ತದೆ.
  • ಇತ್ತೀಚೆಗೆ ಸಣ್ಣ ರೈತರ ಕೃಷಿ ವಹಿವಾಟು ಒಕ್ಕೂಟಕ್ಕೆ ತೀರಾ ಪ್‍ರಮುಖವಾದ ದೆಹಲಿ ಕಿಸಾನ್ ಮಂಡಿ ಹಾಗೂ ನ್ಯಾಷನಲ್ ಅಗ್ರಿಕಲ್ಚರ್ ಮಾರ್ಕೆಟ್ ಸ್ಕೀಂ ಯೋಜನೆಯನ್ನು ಅನುಷ್ಠಾನಗೊಳಿಸುವ ಹೊಣೆಯನ್ನೂ ವಹಿಸಲಾಗಿದೆ.
  • ಇ- ಮಾರುಕಟ್ಟೆ ಸೌಲಭ್ಯದ ಮೂಲಕ ಉಚಿತ ಕೃಷಿ ವ್ಯಾಪಾರ ಹಾಗೂ ಬೆಲೆ ಸಂಶೋಧನೆ ವ್ಯವಸ್ಥೆಯನ್ನೂ ಇದು ಒದಗಿಸುತ್ತದೆ.
  • ಈ ಸಂಸ್ಥೆಯ ಮೂಲಭೂತ ಉದ್ದೇಶವೆಂದರೆ, ಕೃಷಿ ಮೌಲ್ಯ ಸರಣಿಗೆ ರೈತರನ್ನು ಸಂಪರ್ಕಿಸುವುದು. ಇದರಲ್ಲಿ ಮುಖ್ಯವಾಗಿ ಹೂಡಿಕೆ, ತಂತ್ರಜ್ಞಾನ ಮತ್ತು ಮಾರುಕಟ್ಟೆ ಸೌಲಭ್ಯಗಳು ಸೇರಿದ್ದು, ಖಾಸಗಿ ಹಾಗೂ ಸಹಕಾರಿ ವಲಯದ ಸಹಯೋಗದಲ್ಲಿ ಇದನ್ನು ಸಾಧಿಸಲಾಗುತ್ತದೆ.
  • ವೆಂಚರ್ ಕ್ಯಾಪಿಟಲ್ ಅಸಿಸ್ಟೆನ್ಸ್ ಹೆಸರಿನಲ್ಲಿ ಬಂಡವಾಳ ಬೆಂಬಲವನ್ನೂ ಇದು ಒದಗಿಸಲಿದ್ದು, ಸಣ್ಣ ಹಾಗೂ ಅತಿಸಣ್ಣ ರೈತರು ಕೃಷಿ ವಹಿವಾಟು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅಗತ್ಯವಾದ ಮತ್ತು ವಿತ್ತೀಯ ಸೇರ್ಪಡೆಗೆ ಪೂರಕ ವಾತಾವರಣವನ್ನೂ ಇದು ಸೃಷ್ಟಿಸಿಕೊಡುವ ಗುರಿ ಹೊಂದಿದೆ.

 

  1. ಎಸ್ಕಾಂಗಳ ಏಕಸ್ವಾಮ್ಯ ಕೊನೆಗಾಣಿಸಲು ಕ್ರಮ

ಪ್ರಮುಖ ಸುದ್ದಿ

 

  • ದೂರಸಂಪರ್ಕ ಸೇವೆಯ ಕಂಪೆನಿಗಳನ್ನು ಬದಲಾಯಿಸುವ ರೀತಿಯಲ್ಲಿಯೇ ವಿದ್ಯುತ್‌ ಪೂರೈಕೆ ಕಂಪೆನಿಗಳನ್ನು (ಎಸ್ಕಾಂ) ಬದಲಾಯಿಸುವುದಕ್ಕೆ ಗ್ರಾಹಕರಿಗೆ ಅವಕಾಶ ನೀಡಲಾಗುವುದು ವಿದ್ಯುತ್‌ ಕಾಯ್ದೆಯ ತಿದ್ದುಪಡಿಗಳು ಅಂಗೀಕಾರವಾದರೆ ಇದು ಜಾರಿಗೆ ಬರಲಿದೆ ಎಂದು ಕೇಂದ್ರ ವಿದ್ಯುತ್‌ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ತಿಳಿಸಿದೆ

ಪ್ರಮುಖ ಅಂಶಗಳು

  • ಬಜೆಟ್‌ ಅಧಿವೇಶನದಲ್ಲಿ ಈ ಮಸೂದೆ ಮಂಡಿಸಲು ಯತ್ನಿಸಲಾಗುವುದು. ವಿದ್ಯುತ್‌ ವಿತರಣೆ ಜಾಲದ ವ್ಯಾಪಾರ ಮತ್ತು ವಿದ್ಯುತ್‌ ಪೂರೈಕೆ ವ್ಯಾಪಾರ ಪ್ರತ್ಯೇಕಿಸುವ ಪ್ರಸ್ತಾವವೂ ಈ ತಿದ್ದುಪಡಿ ಮಸೂದೆಯಲ್ಲಿ ಇದೆ.

 

  • ಎಸ್ಕಾಂಗಳ ವಿತರಣೆ ಮತ್ತು ಪೂರೈಕೆ ವಿಭಾಗಗಳನ್ನು ಹೇಗೆ ಪ್ರತ್ಯೇಕಿಸಬಹುದು ಎಂಬ ಬಗ್ಗೆ ರಾಜ್ಯಗಳ ಜತೆ ಸಮಾಲೋಚನೆ ನಡೆಸಲಾಗುವುದು. ಒಂದು ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚು ಕಂಪೆನಿಗಳಿಗೆ ವಿದ್ಯುತ್‌ ವಿತರಣೆಗೆ ಅವಕಾಶ ನೀಡಲಾಗುವುದು. ಈ ಮೂಲಕ ಎಸ್ಕಾಂಗಳ ಏಕಸ್ವಾಮ್ಯ ಕೊನೆಯಾಗಲಿದೆ.

 

  • ನವೀಕರಿಸಬಹುದಾದ ಇಂಧನ ಖರೀದಿಯ ನಿಯಮ ಜಾರಿ ಮಾಡಲಾಗುವುದು. ವಿದ್ಯುತ್‌ಗೆ ಪಡೆಯುವ ಕನಿಷ್ಠ ಮತ್ತು ಗರಿಷ್ಠ ದರಗಳ ನಡುವೆ ಶೇ 20 ಕ್ಕಿಂತ ಹೆಚ್ಚಿನ ಅಂತರ ಇರುವಂತಿಲ್ಲ ಎಂಬುದುಮಸೂದೆಯ ಮತ್ತೊಂದು ಅಂಶ. ಕೈಗಾರಿಕೆಗಳಿಗೆ ಮಿತದರದಲ್ಲಿ ವಿದ್ಯುತ್‌ ಒದಗಿಸುವ ಬಗ್ಗೆಯೂ ಪ್ರಸ್ತಾವ ಇದೆ.

 

ಮಸೂದೆಯಲ್ಲಿ ಏನಿದೆ ?

 

  • ಪೂರ್ವ ಪಾವತಿ (ಪ್ರೀಪೇಡ್‌), ಸ್ಮಾರ್ಟ್‌ ಮೀಟರ್‌ ವ್ಯವಸ್ಥೆ ಜಾರಿ

 

  • 2019 ಮಾರ್ಚ್‌ನೊಳಗೆ ಅನಿರ್ಬಂಧಿತ ವಿದ್ಯುತ್‌ ಪೂರೈಕೆ ಅನುಷ್ಠಾನ

 

  • ಲೋಡ್‌ ಶೆಡ್ಡಿಂಗ್‌ ಇಲ್ಲವೇ ಇಲ್ಲ; ತಾಂತ್ರಿಕ, ನೈಸರ್ಗಿಕ ವಿಕೋಪಗಳು ಉಂಟಾದರೆ ಮಾತ್ರ ವಿದ್ಯುತ್‌ ಕಡಿತ

 

  • ವಿದ್ಯುತ್‌ ಪೂರೈಕೆ ಸ್ಥಗಿತಗೊಂಡರೆ ದಂಡ

 

  • ವಿದ್ಯುತ್‌ ಸೋರಿಕೆ ತಡೆಗೆ ಕ್ರಮಗಳು: ಶೇ 21ಕ್ಕಿಂತ ಹೆಚ್ಚು ಸೋರಿಕೆ ಇರುವ ರಾಜ್ಯಗಳಿಗೆ ಸೋರಿಕೆ ಕಡಿಮೆ ಮಾಡಲು ಸೂಚನೆ

 

  • ತಾಂತ್ರಿಕ ಕಾರಣಗಳಿಂದಾಗುವ ಸೋರಿಕೆ ಶೇ 7 ಮಾತ್ರ; ಅದಕ್ಕಿಂತ ಹೆಚ್ಚಿನ ಸೋರಿಕೆಯನ್ನು ವಿದ್ಯುತ್‌ ಕಳ್ಳತನ ಎಂದು ಪರಿಗಣನೆ

 

  • ವಿದ್ಯುತ್‌ ಸೋರಿಕೆ ಪ್ರಮಾಣವನ್ನು 2019ರೊಳಗೆ ಶೇ 15ಕ್ಕೆ ಇಳಿಸಲು ರಾಜ್ಯಗಳಿಗೆ ಸೂಚನೆ.

 

 

  1. ಕಥಾಕಾರ್

ಪ್ರಮುಖ ಸುದ್ದಿ

 

  • ನವದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದಲ್ಲಿ ೭ನೇ ವರ್ಷದ ಅಂತರರಾಷ್ಟ್ರೀಯ ಕಥನ ಹಬ್ಬ ‘ಕಥಾಕಾರ್’, ನಡೆಯಿತು.  ಈ ಬಾರಿಯ ಉತ್ಸವದ ಪಾಲುದಾರರೆಂದರೆ, ಸಂಸ್ಕøತಿ ಸಚಿವಾಲಯದ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ಗುರಗಾಂವ್‍ನ ಹೆರಿಟೇಜ್ ಟ್ರಾನ್ಸ್‍ಪೋರ್ಟ್ ಮ್ಯೂಸಿಯಂ ಹಾಗೂ ಪ್ರದರ್ಶಕ ಕಲೆಗಳ ರಾಷ್ಟ್ರೀಯ ಕೇಂದ್ರ.

ಕಥಾಕಾರ್ ಹಬ್ಬದ ಬಗ್ಗೆ

 

  • ಇದು ಭಾರತದಲ್ಲಿ ನಡೆಯುವ ಏಕೈಕ ಕಥೆ ಹೇಳುವ ಸ್ಪರ್ಧೆಯಾಗಿದೆ. ಗುಮ್ಮಖಡ್ ನಾರಾಯಣ್ ಪ್ರವಾಸಿ ಸಾಹಿತ್ಯ ಉತ್ಸವದ ಭಾಗವಾಗಿರುವ ಈ ಉತ್ಸವ, ಯುನೆಸ್ಕೊ ಆಶ್ರಯದಲ್ಲಿ 2010ರಲ್ಲಿ ಆರಂಭವಾಗಿದೆ.
  • ಕಥಾಕಾರ್ ಎನ್ನುವುದು ವಿಶಿಷ್ಟ ಯೋಜನೆಯಾಗಿದ್ದು, ವಿಶ್ವಾದ್ಯಂತ ಬೆಳೆದುಬಂದಿರುವ ಮೌಖಿಕವಾಗಿ ಕಥೆ ಹೇಳುವ ಸಂಪ್ರದಾಯವನ್ನು ಉಳಿಸಿಕೊಂಡು ಹೋಗುವುದು ಇದರ ಉದ್ದೇಶ. ಇದು ಕಲಾಪ್ರಕಾರವನ್ನು ಉಳಿಸುವ ಹಾಗೂ ಹೊಸ ಪ್ರೇಕ್ಷಕರನ್ನು ಸೃಷ್ಟಿಸುವ ಗುರಿ ಹೊಂದಿದೆ.

 

9.ಕೃಷಿ ಮತ್ತು ಬೆಳೆ ರೋಗ ವಿಷಯಗಳಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಇಟಲಿ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

ಪ್ರಮುಖ ಸುದ್ದಿ

 

  • ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಇಟಲಿಯ ನಡುವೆ ಕೃಷಿ ಮತ್ತು ಬೆಳೆ ರೋಗ ವಿಷಯಗಳಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ (ಎಂ.ಓ.ಯು)ಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ. ಇದು 2018ರ ಜನವರಿಯಲ್ಲಿ ಅವಧಿ ಮುಗಿಯಲಿರುವ ಹಾಗೂ 2008ರ ಜನವರಿಯಲ್ಲಿ ಅಂಕಿತ ಹಾಕಲಾಗಿದ್ದ ತಿಳಿವಳಿಕೆ ಒಪ್ಪಂದವನ್ನು ಬದಲಾಯಿಸಲಿದೆ.

ಪ್ರಮುಖ ಸಂಗತಿಗಳು

  • ಈ ತಿಳಿವಳಿಕೆ ಒಪ್ಪಂದವು ಬೆಳೆ ರೋಗ, ಕೃಷಿ ಉತ್ಪಾದನೆ ಕ್ಷೇತ್ರದಲ್ಲಿ ಮತ್ತು ಪಶು ಸಂಗೋಪನೆ, ಕೃಷಿ ಸಂಶೋಧನೆ, ಆಹಾರ ಸಂಸ್ಕರಣೆ ಮತ್ತು ಮತ್ತು ಎರಡೂ ಕಡೆಯವರು ಸಮ್ಮತಿಸುವ ಇತರ ಹೆಚ್ಚುವರಿ ಕ್ಷೇತ್ರಗಳು ಸೇರಿದಂತೆ ವಿಸ್ತೃತ ಶ್ರೇಣಿಯ ಇತರ ವಲಯಗಳ ಸಹಕಾರಕ್ಕೆ ಅವಕಾಶ ನೀಡುತ್ತದೆ.

 

  • ಈ ತಿಳಿವಳಿಕೆ ಒಪ್ಪಂದದಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಪರಿಸ್ಥಿತಿ, ತಾಂತ್ರಿಕ ವಿನಿಮಯ ಬಲವರ್ಧನೆ ಮತ್ತು ಕೃಷಿ ಯಾಂತ್ರೀಕರಣ/ಕೃಷಿ ವ್ಯವಸ್ಥೆ ಮತ್ತು ಕೃಷಿ ಕೈಗಾರಿಕೆ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಉತ್ಪಾದನಾ ಸಹಕಾರ, ತಾಂತ್ರಿಕ ತಡೆಗಳ ನಿವಾರಣೆ ಮತ್ತು ಆಧುನಿಕ ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನ ಇತ್ಯಾದಿ ಸೇರಿದಂತೆ ಪಶುಸಂಗೋಪನೆ ಕ್ಷೇತ್ರದಲ್ಲಿನ ಅನುಭವಗಳ ವಿನಿಮಯಕ್ಕೆ ಅವಕಾಶಗಳಿವೆ.

 

  • ಈ ತಿಳಿವಳಿಕೆ ಒಪ್ಪಂದವು ಕೃಷಿ ಕ್ಷೇತ್ರದಲ್ಲಿನ ದ್ವಿಪಕ್ಷೀಯ ವಿನಿಮಯ, ಕೃಷಿ ಸಹಕಾರ ಕುರಿತ ದೀರ್ಘ ಕಾಲೀನ ಉಪಕ್ರಮ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಂಟಿ ಕಾರ್ಯ ಗುಂಪು ರಚಿಸಲು ಅವಕಾಶ ಕಲ್ಪಿಸುತ್ತದೆ ಮತ್ತು ನಿರ್ದಿಷ್ಟ ಜಂಟಿ ಪ್ರಕ್ರಿಯೆಗಳ ಮೂಲಕ ರಫ್ತು ಸರಕುಗಳಲ್ಲಿ ಬೆಳೆ ರೋಗದ ಅಪಾಯ ತಗ್ಗಿಸಲು ಸಹಕಾರ ಉತ್ತೇಜಿಸುತ್ತದೆ.

 

  • ಇದು ಎರಡೂ ದೇಶಗಳ ಸರ್ಕಾರಿ ಸಂಸ್ಥೆಗಳು, ವೈಜ್ಞಾನಿಕ ಮತ್ತು ಶೈಕ್ಷಣಿಕ ಸಂಸ್ಥೆಗಳು ಮತ್ತು ವಾಣಿಜ್ಯ ಸಮುದಾಯದ ನಡುವೆ ಸಂಪರ್ಕಕ್ಕೆ ಅವಕಾಶ ಮತ್ತು ಉತ್ತೇಜನ ನೀಡುತ್ತದೆ ಹಾಗೂ ಎರಡೂ ದೇಶಗಳ ಸಂಬಂಧಿತ ಸಂಶೋಧನಾ ಸಂಸ್ಥೆಗಳ ನಡುವೆ ಸಹಕಾರವನ್ನು ಮತ್ತಷ್ಟು ಹೆಚ್ಚಿಸಿ ಉತ್ತೇಜನ ನೀಡುತ್ತದೆ.

 

  1. ದೆಹಲಿ ಸರ್ಕಾರಕ್ಕೆ ಹಸಿರು ಪೀಠ ತರಾಟೆ

ಪ್ರಮುಖ ಸುದ್ದಿ

 

  • ವಾಯುಮಾಲಿನ್ಯ ತಡೆಗೆ ಸೂಕ್ತ ಕ್ರಿಯಾ ಯೋಜನೆ ರೂಪಿಸದಿರುವುದಕ್ಕೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು(ಎನ್‌ಜಿಟಿ) ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ವರದಿ ನೀಡುವಂತೆ 48 ಗಂಟೆಗಳ ಗಡುವು ನೀಡಿದೆ.

ಮುಖ್ಯ ಅಂಶಗಳು

  • ಬಹುದಿನಗಳಿಂದ ನವದೆಹಲಿಯಲ್ಲಿ ವಾಯುಮಾಲಿನ್ಯದ ಸಮಸ್ಯೆ ಇದ್ದರೂ ಭಾರತ–ಶ್ರೀಲಂಕಾ ಟೆಸ್ಟ್‌ ಪಂದ್ಯ ಆಯೋಜಿಸಲು ಯಾಕೆ ಅನುಮತಿ ನೀಡಿದಿರಿ. ನಿಗದಿತ ಕಾಲಮಿತಿಯೊಳಗೆ ಕ್ರಿಯಾ ಯೋಜನೆಯ ರೂಪರೇಷೆಗಳನ್ನು ನ್ಯಾಯಾಲಯಕ್ಕೆ ಯಾಕೆ ಸಲ್ಲಿಸಿಲ್ಲ ಎಂದು ದೆಹಲಿಯ ಸರ್ಕಾರವನ್ನು ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ನೇತೃತ್ವದ ಪೀಠ ಪ್ರಶ್ನಿಸಿದೆ.

 

  • ಮುಖ್ಯಕಾರ್ಯದರ್ಶಿ ಮತ್ತು ಪರಿಸರ ಇಲಾಖೆಯ ಕಾರ್ಯದರ್ಶಿಗಳು ಬದಲಾಗಿದ್ದಾರೆ. ಕ್ರಿಯಾ ಯೋಜನೆ ಸಿದ್ಧಪಡಿಸಲು ಹೆಚ್ಚಿನ ಕಾಲಾವಕಾಶ ಬೇಕು ಎಂದು ದೆಹಲಿ ಸರ್ಕಾರದ ಪ್ರತಿನಿಧಿಗಳು ನ್ಯಾಯಾಲಯಕ್ಕೆ ತಿಳಿಸಿದರು. ಆಗ, ಮುಂದಿನ 48 ಗಂಟೆಗಳಲ್ಲಿ ವರದಿ ನೀಡುವಂತೆ ಪೀಠ ಸೂಚಿಸಿತು.

 

  • ‘ವಾಯುಮಾಲಿನ್ಯ ಈ ವಾರ ವಿಪರೀತ ಹೆಚ್ಚಲಿದೆ ಎಂದು ಎಲ್ಲ ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತಿವೆ. ಆದರೂ ನೀವು ಯಾವ ಕ್ರಮ ಕೈಗೊಂಡಿಲ್ಲ. ಕ್ರಿಕೆಟಿಗರು ಮಾಸ್ಕ್ ಧರಿಸಿ ಆಟವಾಡುತ್ತಿದ್ದಾರೆ. ಇಂತಹ ವಾತಾವರಣದಲ್ಲಿ ಪಂದ್ಯವನ್ನೆ ಆಯೋಜಿಸಬಾರದಿತ್ತು. ಇದನ್ನೆಲ್ಲ ದೆಹಲಿ ವಾಸಿಗಳು ಸಹಿಸುತ್ತಾರೆಂದು ಭಾವಿಸಿದ್ದಿರಾ ಎಂದು ಪೀಠ ಪ್ರಶ್ನಿಸಿದೆ.
  • ‘ಸಮ–ಬೆಸ ನಿಯಮದಿಂದ ದ್ವಿಚಕ್ರ ವಾಹನಗಳನ್ನು ಹೊರಗಿಡಲು ಬಯಸುತ್ತೀರಿ. ನಗರದಲ್ಲಿ 60 ಲಕ್ಷವಿರುವ ಈ ವಾಹನಗಳಿಂದಲೆ ಮಾಲಿನ್ಯ ಹೆಚ್ಚುತ್ತಿದೆ ಎಂದು ನೀವೇಕೆ ಯೋಚಿಸುತ್ತಿಲ್ಲ. ಮೂರು ವರ್ಷಗಳಿಂದ ಹೊಸ ಬಸ್‌ಗಳನ್ನು ಯಾಕೆ ರಸ್ತೆಗಿಳಿಸಿಲ್ಲ’ ಎಂದು ಪ್ರಶ್ನಿಸಿದೆ.

 

  • ಮಾಲಿನ್ಯ ತ‌ಗ್ಗಿಸುವ ಕುರಿತ ಕ್ರಿಯಾಯೋಜನೆ ಸಲ್ಲಿಸುವಂತೆ ನ.28ರಂದು ಮಂಡಳಿಯು ದೆಹಲಿ, ಹರಿಯಾಣ, ಪಂಜಾಬ್‌, ಉತ್ತರ ಪ್ರದೇಶ ಮತ್ತು ರಾಜಸ್ತಾನಗಳ ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು.

 

  • ದೆಹಲಿಯ ವಾತಾವರಣದಲ್ಲಿ ತೇವಾಂಶ ಹೆಚ್ಚಿ, ಗಾಳಿಯ ವೇಗ ಕಡಿಮೆಯಾಗಿದೆ. ಹಾಗಾಗಿ, ವಾಯುಮಾಲಿನ್ಯದ ಪ್ರಮಾಣ ಹೆಚ್ಚಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 

  1. ಚಬಾಹರ್ ಬಂದರಿನ ಮೊದಲ ಹಂತದ ಉದ್ಘಾಟನೆ

ಪ್ರಮುಖ ಸುದ್ದಿ  

  • ಒಮನ್‌ ಕೊಲ್ಲಿಯಲ್ಲಿ ಭಾರತ ಮತ್ತು ಇರಾನ್‌ ಜಂಟಿಯಾಗಿ ನಿರ್ಮಿಸಿರುವ, ಆಯಕಟ್ಟಿನ ‘ಛಬಹಾರ್‌’ ಬಂದರಿನ ಮೊದಲ ಹಂತವನ್ನು ಇರಾನ್‌ ಅಧ್ಯಕ್ಷ ಹಸ್ಸನ್‌ ರೌಹಾನಿ ಅವರು ಉದ್ಘಾಟಿಸಿದರು.ಇದರೊಂದಿಗೆ ಪಾಕಿಸ್ತಾನದ ಗಡಿಯನ್ನು ಪ್ರವೇಶಿಸದೆಯೇ ಇರಾನ್‌, ಅಫಘಾನಿಸ್ತಾನ ಮತ್ತು ಸಂಪದ್ಭರಿತ ಕೇಂದ್ರ ಏಷ್ಯಾದ ದೇಶಗಳೊಂದಿಗೆ ವ್ಯಾಪಾರ-ವ್ಯವಹಾರಕ್ಕೆ ಭಾರತಕ್ಕೆ ಅಧಿಕೃತ ರಹದಾರಿ ದೊರೆತಂತಾಗಿದೆ.

 

ಪ್ರಮುಖ ಸಂಗತಿಗಳು

  • ತನ್ನ ಗಡಿಯ ಮೂಲಕ ಸರಕು ಮತ್ತು ಸಾಗಣೆಗೆ ಭಾರತಕ್ಕೆ ಅವಕಾಶ ಮಾಡಿಕೊಡದ ಪಾಕಿಸ್ತಾನಕ್ಕೆ ಛಬಹಾರ್‌ ಬಂದರಿನ ಮೂಲಕ ಭಾರತ ತಿರುಗೇಟು ನೀಡಿದೆ.
  • ಅಲ್ಲದೆ, ಚೀನಾ ಮತ್ತು ಪಾಕಿಸ್ತಾನ ಜಂಟಿಯಾಗಿ ಪಾಕ್‌ ಗಡಿಯಲ್ಲಿ (ಛಬಹಾರ್‌ನಿಂದ 80 ಕಿ.ಮೀ. ದೂರದಲ್ಲಿ) ನಿರ್ಮಿಸುತ್ತಿರುವ ಗ್ವಾದರ್‌ ಬಂದರಿನ ಭವಿಷ್ಯವನ್ನೂ ಇದು ದುರ್ಬಲಗೊಳಿಸಲಿದೆ.
  • ಉದ್ಘಾಟನೆಗೊಂಡ ಬಂದರಿನ ಮೊದಲ ಹಂತದ ಭಾಗವು, ಐದು ಹೊಸ ಅಡಗುಕಟ್ಟೆಗಳನ್ನು ಒಳಗೊಂಡಿದ್ದು, ಈ ಪೈಕಿ ಎರಡು ಹಡಗು ಕಟ್ಟೆಗಳಲ್ಲಿ 100,000 ಟನ್‌ ಸಾಮರ್ಥ್ಯ‌ದವರೆಗಿನ ಬೃಹತ್‌ ಹಡಗುಗಳನ್ನು ಲಂಗರು ಹಾಕಬಹುದಾಗಿದೆ.

 

  • ಈ ಬಂದರಿನೊಂದಿಗೆ ರೈಲು ಮತ್ತು ರಸ್ತೆ ಸಂಪರ್ಕಗಳನ್ನು ನಿರ್ಮಿಸಿ, ಕೇಂದ್ರೀಯ ಏಷ್ಯಾದ ನೆಲಾವೃತ (ಲ್ಯಾಂಡ್‌ಲಾಕ್ಡ್‌) ದೇಶಗಳಿಗೂ ಸರಕುಗಳ ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು. ರಷ್ಯಾ ಮೂಲಕ ಪೂರ್ವ ಮತ್ತು ಉತ್ತರ ಯೂರೋಪ್‌ಗೂ ಸರಕುಗಳ ಸಾಗಣೆಗೆ ಸಾರಿಗೆ ಸೌಕರ್ಯ ಒದಗಿಸಲಾಗುವುದು .

 

  • ಸುಮಾರು 21 ಸಾವಿರ ಕೋಟಿ ರೂ. ವೆಚ್ಚದಲ್ಲಿ ಈ ಬಂದರನ್ನು ನಿರ್ಮಾಣ ಮಾಡಲಾಗಿದ್ದು, ಮೊದಲ ಹಂತಕ್ಕಾಗಿ ಇರಾನ್‌ 1 ಶತಕೋಟಿ ಡಾಲರ್‌ ಹೂಡಿಕೆ ಮಾಡಿದೆ. ಎರಡನೇ ಹಂತ ಪೂರ್ಣಗೊಳ್ಳುವವರೆಗೂ ಮೊದಲ ಹಂತದ ನಿರ್ವಹಣೆ ಹೊಣೆಯನ್ನು ಭಾರತವೇ ಹೊರಬೇಕೆಂದು ಇರಾನ್‌ ಬಯಸುತ್ತಿರುವುದಾಗಿ ಮೂಲಗಳು ತಿಳಿಸಿವೆ.
  • ಛಬಹಾರ್‌ನಲ್ಲಿ ವಿಮಾನ ನಿಲ್ದಾಣ, ಇರಾನ್‌ ವಾಯುನೆಲೆ ಮತ್ತು ನೌಕಾನೆಲೆಗಳು ಇದ್ದು, ಇದೀಗ ಬಂದರು ಅಭಿವೃದ್ಧಿಯೊಂದಿಗೆ ಈ ನಗರವು ಕೇಂದ್ರ ಏಷ್ಯಾ ಜತೆ ಭಾರತದ ವ್ಯಾಪಾರಕ್ಕೆ ಕೇಂದ್ರಬಿಂದುವಾಗಲಿದೆ.

 

ಛಬಹಾರ್‌ ವಿಶೇಷಗಳು:

  • 2003ರಲ್ಲಿ ಈ ಬಂದರು ಅಭಿವೃದ್ಧಿ ಬಗ್ಗೆ ಭಾರತ ಮಾತುಕತೆ.
  • ಪಾಕ್‌ನ ಗಡಿ ಸ್ಪರ್ಶಿಸದೇ ಅಫಘಾನಿಸ್ತಾನ, ಮಧ್ಯ ಏಷ್ಯಾಕ್ಕೆ ಸುಲಭವಾಗಿ ಕಡಲಿನ ಮೂಲಕ ಆಮದು ರಫ್ತು ಮಾಡಿಕೊಳ್ಳಬಹುದು.
  • ಚೀನಾಕ್ಕೆ ಸಹಾಯ ಮಾಡಲೆಂದೇ ಪಾಕಿಸ್ತಾನ ನಿರ್ಮಿಸಿರುವ ಗ್ವಾದರ್‌ ಬಂದರಿಗೆ ಛಬಹಾರ್‌ ಅನ್ನು ಪ್ರತಿಸ್ಪರ್ಧಿಯಾಗಿಸುವ ಇರಾದೆ ಭಾರತದ್ದು.
  • ಈ ಯೋಜನೆಗೆ ಸರಕಾರ ಈಗಾಗಲೇ 150 ದಶಲಕ್ಷ ಡಾಲರ್‌ ಬಿಡುಗಡೆ ಮಾಡಿದೆ. ಬಂದರು ಮಾತ್ರವಲ್ಲದೆ, ಬಂದರಿನಿಂದ ಮುಂದಕ್ಕೆ ರಸ್ತೆ ಮತ್ತು ರೈಲು ಮಾರ್ಗ ನಿರ್ಮಾಣಕ್ಕೆ ಭಾರತ 500 ದಶಲಕ್ಷ ಡಾಲರ್‌ ಹೂಡಿಕೆ ಮಾಡಲಿದೆ.
  • ಛಬಹಾರ್‌ ಭಾರತದ ಮೊತ್ತ ಮೊದಲ ವಿದೇಶಿ ಬಂದರಾಗಲಿದ್ದು, 2.5 ದಶಲಕ್ಷ ಟನ್‌ ಪ್ರತಿ ವರ್ಷ ಹಾಂಡಲ್‌ ಮಾಡುವ ಸಾಮರ್ಥ್ಯ‌.

 

Share