13th NOVEMBER -Daily Current Affairs

13th NOVEMBER

 

1.ಅಂತರರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ

ಸನ್ನಿವೇಶ

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಪಿಲಿಪ್ಪೀನ್ಸ್ ನ ಲಾಸ್ ಬನೋಸ್ ನಲ್ಲಿರುವ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ (ಐ.ಆರ್.ಆರ್.ಐ.)ಗೆ ಭೇಟಿ ನೀಡಿದ್ದರು.

 

ಅಂತರರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ (IRRI) ಬಗ್ಗೆ

  • ಇದು ಅಂತರಾಷ್ಟ್ರೀಯ ಕೃಷಿ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಾಗಿದ್ದು, 1960 ರ ದಶಕದಲ್ಲಿ ಹಸಿರು ಕ್ರಾಂತಿಗೆ  ಕೊಡುಗೆ ನೀಡಿರುವ  ವಿವಿಧ  ಅಕ್ಕಿ ತಳಿಗಳ ಅಭಿವೃದ್ಧಿಗೆ ಹೆಸರುವಾಸಿಯಾಗಿದೆ.

ಇದರ ಉದ್ದೇಶವೇನು ?

  • ಐ.ಆರ್.ಆರ್.ಐ. ಅಕ್ಕಿ ವಿಜ್ಞಾನದ ಮೂಲಕ ಹಸಿವು ಮತ್ತು ಬಡತನವನ್ನು ತಗ್ಗಿಸಲು ಭತ್ತ ಬೆಳೆವ ರೈತರ ಮತ್ತು ಗ್ರಾಹಕರ ಆರೋಗ್ಯ ಮತ್ತು ಕ್ಷೇಮವನ್ನು ಸುಧಾರಿಸುವ; ಮತ್ತು ಭವಿಷ್ಯದ ಪೀಳಿಗೆಗೆ ಭತ್ತ ಬೆಳೆವ ಪರಿಸರವನ್ನು ಸಂರಕ್ಷಿಸಲು ಸಮರ್ಪಿತವಾದ ಪ್ರಧಾನ ಸಂಶೋಧನಾ ಸಂಸ್ಥೆಯಾಗಿದೆ.

 

 ಭಾರತ ಮತ್ತು ಐ.ಆರ್.ಆರ್.ಐ.

  • ವಾರಾಣಾಸಿಯಲ್ಲಿರುವ ರಾಷ್ಟ್ರೀಯ ಬೀಜ ಸಂಶೋಧನಾ ಮತ್ತು ತರಬೇತಿ ಕೇಂದ್ರದ ಕ್ಯಾಂಪಸ್‍ನಲ್ಲಿ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ ಹಾಗೂ ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರ ಸ್ಥಾಪಿಸಲು ಈಗಾಗಲೇ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
  • ಅಕ್ಕಿ ಸಂಶೋದನೇಗೆ ಸಂಬಂಧಿಸಿದಂತೆ ಅತ್ಯುನ್ನತ ಸಂಸ್ಥೆಯನ್ನು ಆರಂಭಿಸಲಾಗುತ್ತಿದ್ದು, ಇದು ಧಾನ್ಯ ಮತ್ತು ಒಣಹುಲ್ಲಿನ ಸ್ಥಿತಿಯನ್ನು ಅಳೆಯಲು ಭಾರಿ ಲೋಹದ ಪ್ರಯೋಗಾಲಯವನ್ನು ಒಳಗೊಂಡಿರುತ್ತದೆ.

 

  • ಪೂರ್ವ ಭಾರತದಲ್ಲಿನ ಮೊದಲ ಅಂತಾರಾಷ್ಟ್ರೀಯ ಕೇಂದ್ರವಾಗಿದ್ದು, ಅಕ್ಕಿ ಉತ್ಪಾದನೆಯ ಸರಬರಾಜು ಮಾಡುವಲ್ಲಿ ಹಾಗೂ ಪೋಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದಕ್ಷಿಣ ಏಷ್ಯಾ ಪ್ರಾದೇಶೀಕ ಕೇಂದ್ರ (ಐಸಾರ್ಕ್)ವು ವಿಶೇಷ ಅಕ್ಕಿ ಪ್ರಭೇಧ ಬೆಳೆಸಲು ಸಹಾಯ ಮಾಡುತ್ತದೆ. ಪ್ರತಿ ಹೆಕ್ಟೇರಿಗೆ ಇಳುವರಿ ಸಾಧಿಸುವುದು ಇದರ ಪ್ರಮುಖ ಗುರಿಗಳಲ್ಲೊಂದು. ಈ ಪ್ರದೇಶದ ರೈತರು ದಕ್ಷಿಣ ಏಷ್ಯಾ ಮತ್ತು ಆಫ್ರಿಕನ್ ದೇಶಗಳ ಪ್ರಯೋಜನ ಪಡೆಯಲಿದ್ದಾರೆ.

 

ಅತ್ಯಂತ ಆರೋಗ್ಯಕರ ಅಕ್ಕಿ-ಭಾರತದ ಸ್ವರ್ಣ ಅಕ್ಕಿ

  • ಭಾರತದಲ್ಲಿ ಬೆಳೆಯುವ ಅಕ್ಕಿ ತಳಿಗಳಲ್ಲಿ ಸ್ವರ್ಣ ಅಕ್ಕಿಯಿಂದ ತಯಾರಿಸಿದ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಅಂತರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ (International Rice Research Institute (IRRI)) ಹೇಳಿದೆ.
  • ಈ ಸಂಶೋಧನೆಯಲ್ಲಿ ಸುಮಾರು 250 ಅಕ್ಕಿ ತಳಿಗಳನ್ನು ಪರೀಕ್ಷಿಸಲಾಯಿತು. ಅದರಲ್ಲಿ ಭಾರತದ ಅಕ್ಕಿ ತಳಿಯಾದ ಸ್ವರ್ಣ ಅಕ್ಕಿಯಲ್ಲಿ ಅತೀ ಕಡಿಮೆ ಗ್ಲೈಸೆಮಿಕ್ ಅಂಶವಿದ್ದು, ಇದು ಅತ್ಯಂತ ಆರೋಗ್ಯಕರವಾದ ಅಕ್ಕಿ ಎಂದು ಸಾಬೀತಾಗಿದೆ.
  • ಈ ಸ್ವರ್ಣ ಅಕ್ಕಿಯಲ್ಲಿ ಕಡಿಮೆ ಗ್ಲೈಸಿಮಿಕ್ ಇಂಡೆಕ್ಸ್ ಅಥವಾ ಜಿಐ (glycemic index ) ಇರುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಈ ಅಕ್ಕಿಯಿಂದ ತಯಾರಿಸಿದ ಪದಾರ್ಥಗಳ ಸೇವನೆ ತುಂಬಾ ಒಳ್ಳೆಯದು. ಬಾಸುಮತಿ ಅಕ್ಕಿಯಲ್ಲಿ ಜಿಐ ಪ್ರಮಾಣ ಸ್ವರ್ಣ ಅಕ್ಕಿಯಲ್ಲಿರುವುದಕ್ಕಿಂತ ಅಧಿಕವಿದೆ. ಜಿಐ ಡಯಾಬಿಟಿಸ್ ಹೆಚ್ಚಾಗಲು ಒಂದು ಮಖ್ಯ ಕಾರಣ. ಆದ್ದರಿಂದ ಜಿಐ ಕಡಿಮೆ ಇರುವ ಆಹಾರವನ್ನು ತಿಂದರೆ ಮಧುಮೇಹ ಬರದಂತೆ ತಡೆಯಬಹುದು. ಆದ್ದರಿಂದ ಈ ಅಕ್ಕಿ ಆರೋಗ್ಯದ ರಕ್ಷಣೆಗೆ ತುಂಬಾ ಸಹಕಾರಿಯಾಗಿದೆ.

 

ಜಿಐ ಎಂದರೇನು?

  • ನಾವು ಸೇವಿಸುವ ಆಹಾರದಲ್ಲಿನ ಕಾರ್ಬೋಹೈಡ್ರೇಟ್ಸ್ ಪ್ರಮಾಣವನ್ನು ಅಳೆಯುವ ಮಾಪಕವನ್ನು ಜಿಐ ಎನ್ನಲಾಗುವುದು. ಅಧಿಕ ಜಿಐ ಇರುವ ಆಹಾರ ಮಧುಮೇಹಿಗಳಿಗೆ ಹಾಗೂ ಬೊಜ್ಜನ್ನು ಹೊಂದಿರುವವರಿಗೆ ಒಳ್ಳೆಯದಲ್ಲ.
  • ಅಧಿಕ ಜಿಐ ಇರುವ ಆಹಾರ ಪದಾರ್ಥಗಳು ಉದಾಹರಣೆಗೆ ಆಲೂಗೆಡ್ಡೆ ಸೇವಿಸಿದರೆ ರಕ್ತದ ಗ್ಲೂಕೋಸ್ ಪ್ರಮಾಣ ವೇಗವಾಗಿ ಏರುವುದು. ಆದರೆ ಕಡಿಮೆ ಜಿಐ ಇರುವ ಆಹಾರಗಳನ್ನು ಸೇವಿಸಿದರೆ ರಕ್ತದ ಗ್ಲುಕೋಸ್ ಮಟ್ಟವನ್ನು ನಿಧಾನವಾಗಿ ಏರಿಸುತ್ತವೆ, ಇದರಿಂದ ಮಧುಮೇಹಿಗಳಿಗೆ ಯಾವುದೇ ಅಪಾಯವಿಲ್ಲ. ಇತರ ಅಕ್ಕಿಗಳಲ್ಲಿ ಜಿಐ ಪ್ರಮಾಣ ಅಧಿಕವಿರುವುದರಿಂದ ಅವುಗಳಿಂದ ತಯಾರಿಸಿದ ಅನ್ನವನ್ನು ಮಧುಮೇಹಿಗಳು ತಿನ್ನಬಾರದು.
  • ಈ ಸ್ವರ್ಣ ಅಕ್ಕಿಯ ಅನ್ನವನ್ನು ತಿಂದರೆ ಇದರಲ್ಲಿ ತುಂಬಾ ಕಡಿಮೆ ಜಿಐ ಇದ್ದು, ತುಂಬಾ ನಿಧಾನಕ್ಕೆ ಜೀರ್ಣವಾಗುವುದರಿಂದ , ದೇಹಕ್ಕೆ ಗ್ಲೂಕೋಸ್ ಅಂಶ ನಿಧಾನಕ್ಕೆ ಸೇರುತ್ತದೆ, ಆದ್ದರಿಂದ ಮಧುಮೇಹ ಕಾಯಿಲೆ ಹತ್ತಿರ ಸುಳಿಯಲೂ ಬಿಡುವುದಿಲ್ಲ.

SOURCE-THE HINDU

 

2.ಪೋರ್ಚುಗೀಸ್ ತೀರದಲ್ಲಿ ಡೈನೋಸಾರ್ ಯುಗದ ತಿಮಿಂಗಿಲ ಪತ್ತೆ

ಪ್ರಮುಖ ಸುದ್ದಿ

 

  • ವಿಜ್ಞಾನಿಗಳ ಮಹತ್ವದ ಶೋಧದಿಂದಾಗಿ ಪೋರ್ಚುಗೀಸ್ ತೀರದಲ್ಲಿ ಸಾಗರ ತಳದಲ್ಲಿ ಡೈನೋಸಾರ್ ಯುಗದ ತಿಮಿಂಗಿಲವೊಂದು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
  • ಅಂತಾರಾಷ್ಟ್ರೀಯ ಆಂಗ್ಲ ದೈನಿಕ ವಾಷಿಂಗ್ಟನ್ ಪೋಸ್ಟ್ ಈ ಬಗ್ಗೆ ವರದಿ ಮಾಡಿದ್ದು, ಪೋರ್ಚುಗೀಸ್ ತೀರದಲ್ಲಿ ಸುಮಾರು 710 ಅಡಿ ಆಳದಲ್ಲಿ ಈ ಬೃಹತ್ ತಿಮಿಂಗಲ ಪತ್ತೆಯಾಗಿದೆ ಎಂದು ವರದಿ ಮಾಡಿದೆ.
  • ವರದಿಯಲ್ಲಿರುವಂತೆ ಈ ತಿಮಿಂಗಲಕ್ಕೆ ಹಾವಿನ ತಲೆ ಇದ್ದು, ಇದರ ಬಾಯಲ್ಲಿ ಬರೊಬ್ಬರಿ 300 ಹಲ್ಲುಗಳಿವೆ ಎಂದು ಹೇಳಿದೆ. ಅಂತೆಯೇ ಈ ಜೀವಂತ ಪಳೆಯುಳಿಕೆ ಟೈರನ್ನೋಸಾರಸ್ ರೆಕ್ಸ್ ಹಾಗೂ ಟ್ರೈಸೆರಟಾಪ್ಸ್ ಇದ್ದಂತಹ ಕಾಲದ್ದಾಗಿರಬೇಕು ಹಾಗೂ 80 ಲಕ್ಷ ವರ್ಷ ಹಳೆಯದ್ದಾಗಿರಬೇಕು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಪ್ರಮುಖ ಅಂಶಗಳು

  • ವರದಿಯಲ್ಲಿರುವಂತೆ ಯೂರೋಪಿಯನ್ ಯೂನಿಯನ್ ಪ್ರಾಜೆಕ್ಟ್ ಸಂಶೋಧಕರು, ಈ ಹಾವಿನಂತಿರುವ ಗಂಡು ತಿಮಿಂಗಿಲವನ್ನು ಅಲ್ಗಾರ್ವೇ ತೀರದಲ್ಲಿ ಕಳೆದ ಬೇಸಿಗೆಯಲ್ಲಿ ಪತ್ತೆ ಹಚ್ಚಿದ್ದರು. ಈ ಜೀವಿ ಉದ್ದ, ಸಪೂರವಾಗಿದ್ದು ಹಾವಿನಂತಹ ದೇಹಾಕೃತಿ ಹೊಂದಿದೆ ಹಾಗೂ 5 ಮೀಟರ್ ಉದ್ದವಿದೆ.
  • ಈ ಜೀವಿಯನ್ನು ‘ಖ್ಲಾಮಿಡೊಸೆಲ್ಖಸ್ ಎಂಗುನಿಯಸ್’ ಎಂದು ಹೆಸರಿಸಲಾಗಿದ್ದು, ಅದರ 300 ಹಲ್ಲುಗಳು 25 ಸಾಲುಗಳಲ್ಲಿ ಫ್ರಿಲ್ ಮಾದರಿ ಜೋಡಿಸಲ್ಪಟ್ಟಿವೆ. ಈ ತಿಮಿಂಗಿಲಕ್ಕೆ ಆರು ಜತೆ ಗಿಲ್ ಅಥವಾ ಶ್ವಾಸಾಂಗವಿದ್ದು, ಅದರ ಅಂಚುಗಳು ನೆರಿಗೆಯಾಕಾರದಲ್ಲಿವೆ. ಸಾಗರ ತಳದಲ್ಲಿ ಸಾಕಷ್ಟು ಪೋಷಕಾಂಶಗಳು ದೊರೆಯದೆ ಈ ಜೀವಿ ಬೆಳೆದಿಲ್ಲ ಎಂದು ವಿಜ್ಞಾನಿಗಳು  ಅಭಿಪ್ರಾಯಪಟ್ಟಿದ್ದಾರೆ.

 

  • ಪೋರ್ಚುಗೀಸ್ ಇನ್‍ಸ್ಟಿಟ್ಯೂಟ್ ಫಾರ್ ದಿ ಸೀ ಎಂಡ್ ಎಟ್ಮಾಸ್ಫಿಯರ್ ಈ ಜೀವಿಯನ್ನು `ಲಿವಿಂಗ್ ಫಾಸ್ಸಿಲ್’ ಎಂದು ಬಣ್ಣಿಸಿದೆ. ಆಸ್ಟ್ರೇಲಿಯಾ, ಜಪಾನ್ ಮತ್ತು ನ್ಯೂಜಿಲ್ಯಾಂಡಿನಲ್ಲಿ ಇತ್ತೀಚೆಗೆ ಪತ್ತೆ ಹಚ್ಚಲಾದ ತಿಮಿಂಗಿಲಗಳ ಪಟ್ಟಿಗೆ ಇದು ಸೇರಿದೆ.
  • ಈ ಜೀವಿ ಸಾಮಾನ್ಯವಾಗಿ ಸಾಗರ ತಳದಲ್ಲಿ 390ರಿಂದ 200 ಅಡಿಯಷ್ಟು ಕೆಳಗಿರುವುದರಿಂದ ಇದನ್ನು 19ನೇ ಶತಮಾನಕ್ಕಿಂತ ಮೊದಲು ಪತ್ತೆ ಹಚ್ಚಲಾಗಿಲ್ಲ ಎಂದು ಹೇಳಲಾಗಿದೆ.

SOURCE-THE HINDU

 

3.ಕೃಷಿ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಭಾರತ ಮತ್ತು ಪಿಲಿಪ್ಪೀನ್ಸ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

ಪ್ರಮುಖ ಸುದ್ದಿ

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಪಿಲಿಪ್ಪೀನ್ಸ್ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು)ಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಪ್ರಮುಖ ಅಂಶಗಳು

  • ಈ ತಿಳಿವಳಿಕೆ ಒಪ್ಪಂದವು, ಕೃಷಿ ಕ್ಷೇತ್ರದ ದ್ವಿಪಕ್ಷೀಯ ಸಹಕಾರವನ್ನು ಸುಧಾರಿಸಲಿದೆ ಮತ್ತು ಎರಡೂ ದೇಶಗಳಿಗೆ ಪರಸ್ಪರ ಲಾಭದಾಯಕವಾಗಿದೆ.
  • ಎರಡೂ ದೇಶಗಳಲ್ಲಿನ ಉತ್ತಮ ಕೃಷಿ ಪದ್ಧತಿಗಳನ್ನು ಅರಿಯಲು ಇದು ಉತ್ತೇಜಿಸುತ್ತದೆ ಮತ್ತು ಉತ್ತಮ ಉತ್ಪಾದನೆಗೆ ನೆರವಾಗಲಿದೆ ಜೊತೆಗೆ ಜಾಗತಿಕ ಮಾರುಕಟ್ಟೆಯ ಪ್ರವೇಶ ಸುಧಾರಣೆ ಮಾಡಲಿದೆ.
  • ಈ ತಿಳಿವಳಿಕೆ ಒಪ್ಪಂದವು ಅಕ್ಕಿ ಉತ್ಪಾದನೆ ಮತ್ತು ಸಂಸ್ಕರಣೆ, ಬಹು ಬೇಸಾಯ ಪದ್ಧತಿ, ಒಣ ಭೂಮಿ ಬೇಸಾಯ ಪದ್ಧತಿ, ಜೈವಿಕ ಸಾವಯವ ಕೃಷಿ, ಘನ ಮತ್ತು ನೀರು ಸಂರಕ್ಷಣೆ ಹಾಗೂ ನಿರ್ವಹಣೆ, ಭೂಮಿಯ ಫಲವತ್ತತೆ, ರೇಷ್ಮೆ ಕೃಷಿ, ಕೃಷಿ ಅರಣ್ಯೀಕರಣ, ಜಾನುವಾರು ಸುಧಾರಣೆ ಇತ್ಯಾದಿ ಕ್ಷೇತ್ರಗಳಲ್ಲಿ ಸಹಕಾರ ಒದಗಿಸುತ್ತದೆ.
  • ಈ ತಿಳಿವಳಿಕೆ ಒಪ್ಪಂದವು ಸಮಾನ ಸಂಖ್ಯೆಯ ಪ್ರತಿನಿಧಿಗಳನ್ನೊಳಗೊಂಡ ಜಂಟಿ ಕಾರ್ಯ ಪಡೆ ರಚನೆಗೂ ಅವಕಾಶ ಕಲ್ಪಿಸುತ್ತದೆ. ಈ ಜಂಟಿ ಕಾರ್ಯಪಡೆಯು ಪ್ರತಿ ಎರಡು ವರ್ಷಕ್ಕೊಮ್ಮೆ ಪರ್ಯಾಯವಾಗಿ ಪಿಲಿಪ್ಪೀನ್ಸ್ ಮತ್ತು ಭಾರತದಲ್ಲಿ ಸಭೆ ಸೇರಲಿದೆ.

SOURCE-PIB

 

4.ದಕ್ಷಿಣ ಚೀನಾ ಸಮುದ್ರ ಬಿಕ್ಕಟ್ಟು

ಪ್ರಮುಖ ಸುದ್ದಿ

  • ಫಿಲಿಪ್ಪೀನ್ಸ್‌ ದೂರು ಆಧರಿಸಿ ವಿಚಾರಣೆ ನಡೆಸಿದ ಹಾಗ್‌ ಅಂತಾರಾಷ್ಟ್ರೀಯ ನ್ಯಾಯಾಲಯ, ದಕ್ಷಿಣ ಚೀನಾ ಸಮುದ್ರ ವಿವಾದ ಸಂಬಂಧ ಚೀನಾ ವಾದದ ವಿರುದ್ಧ ಇತ್ತೀಚಿಗಷ್ಟೇ ತೀರ್ಪು ಪ್ರಕಟಿಸಿದೆ. ಆದರೆ, ಈ ತೀರ್ಪಿಗೆ ಚೀನಾ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ನ್ಯಾಯಾಲಯ ಆದೇಶ ತನಗೆ ಸಮ್ಮತವಲ್ಲ ಎಂದು ಹೇಳುತ್ತಿರುವುದು, ವಿವಾದದ ಬಿಸಿ ಹೆಚ್ಚಳಕ್ಕೆ ಕಾರಣವಾಗಿದೆ. ಆಗ್ನೇಯ ಏಷ್ಯಾದ ಚಿಕ್ಕ ಚಿಕ್ಕ ರಾಷ್ಟ್ರಗಳು ಚೀನಾದ ವಿಸ್ತರಣಾ ನಿಯಂತ್ರಣಾ ನೀತಿಯಿಂದ ಬಳಲುತ್ತಿವೆ.

 

 ಮುಖ್ಯ ಅಂಶಗಳು

 

  • ತನ್ನ ವ್ಯಾಪ್ತಿ ಮೀರಿ ಚೀನಾ ರಾಷ್ಟ್ರವು ದಕ್ಷಿಣ ಚೀನಾ ಸಮುದ್ರದಲ್ಲಿ ಹಕ್ಕು ಸಾಧಿಸುತ್ತಿದೆ ಎಂದು ಫಿಲಿಪ್ಪೀನ್ಸ್‌ ಅಂತಾರಾಷ್ಟ್ರೀಯ ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ(ಪಿಸಿಎ) ದೂರು ನೀಡಿತ್ತು. ಈ ಬಗ್ಗೆ ತೀರ್ಪು ಪ್ರಕಟಿಸಿದ ನ್ಯಾಯಾಲಯ, ”ಚೀನಾ ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸುತ್ತಿರುವುದು ಸ್ಪಷ್ಟ. ಅದು ತನ್ನ ವಿಸ್ತರಣಾ ನೀತಿಯನ್ನು ಕೈಬಿಡಬೇಕು” ಎಂದು ಆದೇಶಿಸಿತು.
  • ಆದರೆ, ನ್ಯಾಯಾಲಯದ ಈ ಆದೇಶವನ್ನು ತಾನು ಒಪ್ಪುವುದಿಲ್ಲ ಎಂದು ಚೀನಾ ಹೇಳಿದ್ದು, ಮತ್ತೆ ವಿವಾದಕ್ಕೆ ಕಾರಣವಾಗಿದೆ. ಯಾವುದೇ ಅಂತಾರಾಷ್ಟ್ರೀಯ ವ್ಯಾಜ್ಯಗಳ ಕುರಿತು ಪಿಸಿಎ ತೀರ್ಪು ನೀಡಬಹುದಷ್ಟೆ. ಆದರೆ, ಆ ತೀರ್ಪನ್ನು ಅನುಷ್ಠಾನಗೊಳಿಸುವ ವ್ಯವಸ್ಥೆ ಅದರ ಬಳಿ ಇಲ್ಲ. ಹೀಗಾಗಿ, ಚೀನಾ ನ್ಯಾಯಾಲಯದ ಆದೇಶಕ್ಕೆ ಸೆಡ್ಡು ಹೊಡೆಯುತ್ತಿದೆ.
  • ಈಗ ಉಳಿದಿರುವ ಏಕೈಕೆ ದಾರಿ ಎಂದರೆ; ಚೀನಾ ಮೇಲೆ ಅಂತಾರಾಷ್ಟ್ರೀಯ ಒತ್ತಡ ತರುವುದು. ಇದನ್ನು ಬಿಟ್ಟರೆ, ರಾಜತಾಂತ್ರಿಕ ಮಾರ್ಗಗಳನ್ನು ಬಳಸಿ, ಅದರ ವಿಸ್ತರಣಾ ನೀತಿಗೆ ಕೊಕ್ಕೆ ಹಾಕುವುದು.
  • ಈ ಪರಿಹಾರೋಪಾಯಗಳು ಅಷ್ಟೊಂದು ಸರಳವಲ್ಲ. ಚೀನಾ ಸದ್ಯ ಏಷ್ಯಾದಲ್ಲೇ ಅತ್ಯಂತ ಬಲಾಢ್ಯ ರಾಷ್ಟ್ರವಾಗಿ ಬೆಳೆಯುತ್ತಿದೆ. ಅದು ತನ್ನ ಈ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳಬೇಕಾದರೆ, ಆಕ್ರಮಣಕಾರಿ ನೀತಿಯನ್ನು ಅನುಸರಿಸುವುದು ಅದಕ್ಕೆ ಅನಿವಾರ್ಯ. ಅದರ ಪರಿಣಾಮವಾಗಿಯೇ ಈ ದಕ್ಷಿಣ ಚೀನಾ ಸಮುದ್ರ ವಿವಾದ ಧೂಳೆಬ್ಬಿಸುತ್ತಿದೆ.
  • ಈ ವಿವಾದದಲ್ಲಿ ಅಮೆರಿಕದ ಹಿತಾಸಕ್ತಿಯೂ ಸೇರಿರುವುದರಿಂದ ಅದಕ್ಕೊಂದು ವಿಶಿಷ್ಟ ಆಯಾಮ ದಕ್ಕಿದೆ. ಈ ಹಿಂದೆ ಅಮೆರಿಕದ ವಿದೇಶಾಂಗ ಸಚಿವೆಯಾಗಿದ್ದ ಹಿಲರಿ ಕ್ಲಿಂಟನ್‌ ಅವರು, ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕದ ಹಿತಾಸಕ್ತಿಯೂ ಇದೆ ಎಂದು ಬಹಿರಂಗವಾಗಿಯೇ ಹೇಳಿದ್ದರು. ಅದರರ್ಥ, ಏಷ್ಯಾ ಖಂಡದಲ್ಲಿ ತನ್ನ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಬೇಕಿದ್ದರೆ, ಚೀನಾಗೆ ಮೂಗುದಾರಿ ಹಾಕಬೇಕಾದ ಅನಿವಾರ್ಯತೆ ಅಮೆರಿಕಕ್ಕೆ ಇದೆ. ಈ ಹಿನ್ನೆಲೆಯಲ್ಲಿ ಅದು ದಕ್ಷಿಣ ಚೀನಾ ಸಮುದ್ರದಲ್ಲಿ ಹೆಚ್ಚು ಉತ್ಸಾಹಿತವಾಗಿ ಪಾಲ್ಗೊಳ್ಳುತ್ತಿದೆ.
  • ತನ್ನ ನೌಕಪಡೆಯನ್ನು ಸಮುದ್ರ ಕಾವಲಿಗಾಗಿ ಕಳುಹಿಸುತ್ತಿದೆ. ಇದು ಸಹಜವಾಗಿಯೇ ಚೀನಾಗೆ ಸಹ್ಯವಾಗುತ್ತಿಲ್ಲ. ತನ್ನ ‘ಹಿತ್ತಲಿನ ಸಮುದ್ರದ’ ಮೇಲೆ ತನ್ನದೇ ಆಧಿಪತ್ಯ ಇರಬೇಕು ಎನ್ನುವುದು ಅದರ ಇಚ್ಛೆ. ಇದಕ್ಕಾಗಿ ಅದು ‘ನೈನ್‌ ಡ್ಯಾಶ್‌ ಲೈನ್‌’ಗಳ ವಾದವನ್ನು ಮುಂದಿಡುತ್ತಿದೆ. ಆದರೆ, ಈ ವಾದವನ್ನು ಆಗ್ನೇಯ ಏಷ್ಯಾ ರಾಷ್ಟ್ರಗಳು ಒಪ್ಪುತ್ತಿಲ್ಲ. ಚೀನಾಗೆ ಎಷ್ಟು ಹಕ್ಕಿದೆಯೋ ಅಷ್ಟೇ ತಮಗೂ ಇದೆ ಆ ರಾಷ್ಟ್ರಗಳು ವಾದಿಸುತ್ತಿವೆ.

 

  • ಭೂಮಿ ಮೇಲಿನ ಅತ್ಯಂತ ಆಯಕಟ್ಟಿನ ಹಾಗೂ ಪ್ರಮುಖ ಕಡಲು ಪ್ರದೇಶ ಇದಾಗಿರುವುದರಿಂದ ಯಾವ ರಾಷ್ಟ್ರಗಳೂ ತಮ್ಮ ನಿಯಂತ್ರಣಾ ನೀತಿಯನ್ನು ಬಿಟ್ಟುಕೊಡುತ್ತಿಲ್ಲ. ಈ ಸಮುದ್ರದ ಆಳದಲ್ಲಿ ತೈಲ ಹಾಗೂ ನೈಸರ್ಗಿಕ ಅನಿಲದ ಬೃಹತ್‌ ನಿಕ್ಷೇಪಗಳಿವೆ. ಜೊತೆಗೆ ಮೀನುಗಾರಿಕೆಗೆ ಹೇಳಿ ಮಾಡಿಸಿದಂಥ ಕಡಲು ಪ್ರದೇಶವೂ ಇದಾಗಿದೆ. ಈ ಸಮುದ್ರ ಮಾರ್ಗ ಜಗತ್ತಿನಲ್ಲಿ ಅತಿ ಹೆಚ್ಚು ಚಟುವಟಿಕೆಯಿಂದ ಕೂಡಿರುವಂಥದ್ದು. ಹಾಗಾಗಿ, ಚೀನಾ ಹಾಗೂ ಆಗ್ನೇಯ ಏಷ್ಯಾ ರಾಷ್ಟ್ರಗಳು ದಕ್ಷಿಣ ಚೀನಾ ಸಮುದ್ರದ ಮೇಲೆ ಹಕ್ಕು ಸಾಧಿಸಲು ಇನ್ನಿಲ್ಲ ಪ್ರಯತ್ನ ಮಾಡುತ್ತಿವೆ.

ಏನಿದು ವಿವಾದ?

 

  • ಸಿಂಪಲ್ಲಾಗಿ ಹೇಳುವುದಾದರೆ; ಭೂಮಿಯ ಮೇಲಿನ ಅತ್ಯಂತ ಆಯಕಟ್ಟಿನ ಹಾಗೂ ಪ್ರಮುಖ ಕಡಲು ಪ್ರದೇಶವಾಗಿರುವ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳು ನಿಯಂತ್ರಣ ಸಾಧಿಸಲು ನಡೆಸುತ್ತಿರುವ ಕದನವಷ್ಟೆ.
  • ಈ ಪ್ರದೇಶದ ಬಹುತೇಕ ಎಲ್ಲ ರಾಷ್ಟ್ರಗಳು ಈ ಸಮುದ್ರದಲ್ಲಿ ತಮ್ಮದೇ ಆದ ಹಕ್ಕು ಸಾಧಿಸಿದ್ದವು. ಆದರೆ, ಕಳೆದ ಕೆಲವು ವರ್ಷಗಳಿಂದ ಚೀನಾ ಮಾತ್ರ ಇಡೀ ಸಮುದ್ರದ ಮೇಲೆ ತನ್ನ ನಿಯಂತ್ರಣ ಸಾಧಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

 

  • ಚೀನಾ ಅಲ್ಲಲ್ಲಿ ಸೇನಾ ಠಾಣೆಗಳನ್ನು ನಿರ್ಮಿಸುತ್ತಿರುವುದು ಮತ್ತು ಬೇರೆ ಬೇರೆ ದೇಶಗಳ ಹಡಗುಗಳನ್ನು ಸೆರೆ ಹಿಡಿಯುತ್ತಿರುವುದು ಅದರ ನಿಯಂತ್ರಣಕ್ಕೆ ಉದಾಹರಣೆ. ಈ ಸಮುದ್ರದಲ್ಲಿ ಚೀನಾದ ನೌಕಾ ಪಡೆ ಭಾರಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ. ಇಡೀ ಪ್ರದೇಶವನ್ನು ನಿಯಂತ್ರಿಸುತ್ತಿದೆ.

 

  • ಏತನ್ಮಧ್ಯೆ, ಚೀನಾದ ಏಕಸ್ವಾಮ್ಯವನ್ನು ಮುರಿಯಲು ಅಮೆರಿಕ ತನ್ನ ನೌಕಾ ಪಡೆಗಳನ್ನು ಇತ್ತ ಅಟ್ಟುತ್ತಿದೆ. ಈ ಸಮುದ್ರದಲ್ಲಿ ಮುಕ್ತ ಸಂಚಾರವನ್ನು ತಾನು ಬೆಂಬಲಿಸುತ್ತಿರುವುದಾಗಿ ಅಮೆರಿಕ ಹೇಳಿಕೊಳ್ಳುತ್ತಿದೆ ಮತ್ತು ಅಂತಾರಾಷ್ಟ್ರೀಯ ಕಾನೂನು ಪ್ರಕಾರ ಚೀನಾ ನಡೆದುಕೊಳ್ಳಬೇಕು ಎಂದು ವಾದಿಸುತ್ತಿದೆ.

ಪಿಸಿಎ ತೀರ್ಪು ಮಹತ್ವವೇಕೆ?

  • ಚೀನಾದ ವಿರುದ್ಧ ಫಿಲಿಪ್ಪೀನ್ಸ್‌ ರಾಷ್ಟ್ರವು ಪಿಸಿಎ(ಪರ್ಮನೆಂಟ್‌ ಕೋರ್ಟ್‌ ಆಫ್‌ ಆರ್ಬಿಟ್ರೇಷನ್‌)ಗೆ ದೂರು ನೀಡಿತ್ತು. ಈ ನ್ಯಾಯಾಲಯ ಫಿಲಿಪ್ಪೀನ್ಸ್‌ ಪರವಾಗಿ ತೀರ್ಪು ಪ್ರಕಟಿಸಿದ್ದು, ಕಡಲು ಪರಿಸರ ನಾಶ ಹಾಗೂ ಫಿಲಿಪ್ಪೀನ್ಸ್‌ನ ಹಡುಗಗಳನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ಚೀನಾ ಅಂತಾರಾಷ್ಟ್ರೀಯ ಕಾನೂನುಗಳನ್ನು ಮುರಿಯುತ್ತಿದೆ ಎಂದು ಹೇಳಿದೆ.
  • ಎಲ್ಲಕ್ಕಿಂತ ಹೆಚ್ಚಾಗಿ, ಸಮುದ್ರದಲ್ಲಿ ಪೂರ್ತಿಯಾಗಿ ತನ್ನದೇ ಕಾರುಬಾರು ನಡೆಯಬೇಕೆಂದು ಚೀನಾ ಬಲವಾಗಿ ಪ್ರತಿಪಾದಿಸುತ್ತಿದ್ದ ‘ನೈನ್‌ ಡ್ಯಾಶ್‌ ಲೈನ್‌’ ವಾದವನ್ನು ತಿರಸ್ಕರಿಸಿದೆ. ನ್ಯಾಯಾಲಯದ ಈ ತೀರ್ಪು ಇನ್ನುಳಿದ ಆಗ್ನೇಯ ಏಷ್ಯಾ ರಾಷ್ಟ್ರಗಳೂ ಚೀನಾ ವಿರುದ್ಧ ತಿರುಗಿ ಬೀಳಲು ನೆರವಾಗಬಹುದು.
  • ಇದರಿಂದಾಗಿ ಚೀನಾ ಅನಿವಾರ್ಯವಾಗಿ ತಾನು ಕ್ಲೇಮು ಮಾಡುತ್ತಿದ್ದ ಅನೇಕ ಸಂಗತಿಗಳನ್ನು ಬಿಟ್ಟುಕೊಡುವ ಅನಿವಾರ್ಯತೆಗೆ ಒಳಗಾಗಬಹುದು. ಚೀನಾ ಸರಕಾರ, ನ್ಯಾಯಾಲಯ ಇಡೀ ಪ್ರಕ್ರಿಯೆಯನ್ನೇ ಬಹಿಷ್ಕರಿಸಿದೆ. ಇದೇ ವೇಳೆ, ನ್ಯಾಯಾಲಯ ಆದೇಶವನ್ನು ಅನುಷ್ಠಾನಕ್ಕೆ ತರುವ ಯಾವುದೇ ಕಾರ್ಯಾಂಗ ವ್ಯವಸ್ಥೆಯನ್ನು ಹೊಂದಿಲ್ಲ. ಚೀನಾ ಈ ವಿಷಯದಲ್ಲಿ ನಿರುಮ್ಮಳವಾಗಿದೆ.

ನೈನ್‌ ಡ್ಯಾಶ್‌ ಲೈನ್‌ ಬಗ್ಗೆ

  • ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದ ತನ್ನ ಅಧಿಕೃತ ನಕಾಶೆಯಲ್ಲಿ ಚೀನಾ ಚಿಕ್ಕ ಡ್ಯಾಶ್‌ ಲೈನ್‌ಗಳನ್ನು ಗುರುತು ಮಾಡಿದೆ(ಮೊದಲು 11 ಲೈನ್‌ಗಳಿದ್ದವು). ಈ ಲೈನ್‌ಗಳು ಚೀನಾದ ದಕ್ಷಿಣ ಕರಾವಳಿಯಿಂದ ಆರಂಭವಾಗಿ ಪೂರ್ತಿ ದಕ್ಷೀಣ ಚೀನಾ ಸಮುದ್ರವನ್ನು ವ್ಯಾಪಿಸಿವೆ.
  • ಈ ಲೈನ್‌ಗಳು ನಿಜವಾಗಿ ಏನ್ನನ್ನು ಸೂಚಿಸುತ್ತವೆ ಎಂಬುದನ್ನು ಚೀನಾ ಇಂದಿಗೂ ಪೂರ್ತಿಯಾಗಿ ಹೊರ ಜಗತ್ತಿಗೆ ವಿವರಿಸಿಲ್ಲ. ಆದರೆ, ಪೂರ್ತಿ ಸಮುದ್ರವನ್ನು ಅದರ ವ್ಯಾಪ್ತಿಗೆ ಸೇರಿಸಿ, ಅದರಲ್ಲಿ ಬರುವ ಸಣ್ಣ ಸಣ್ಣ ದ್ವೀಪಗಳನ್ನು ತನ್ನದು ಎನ್ನುತ್ತಿದೆ. ವಾಸ್ತವದಲ್ಲಿ ಈ ದ್ವೀಪಗಳು ತಮ್ಮವು ಎಂದು ಉಳಿದ ಐದು ರಾಷ್ಟ್ರಗಳು ಕೂಡ ಹೇಳಿಕೊಳ್ಳುತ್ತವೆ.
  • ಕಡಲು ಭೂ ಪ್ರದೇಶಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಜತೆಗಿನ ಒಡಂಬಡಿಕೆಗೆ ಸಹಿ ಹಾಕಿದ್ದು, ಅದರಲ್ಲಿ ಸೂಚಿಸಿದ್ದ ಪ್ರದೇಶಗಳನ್ನು ಮೀರಿ ಚೀನಾ ಇತರೆ ಕಡಲು ಭೂಪ್ರದೇಶಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಈ ಕಡಲು ಭೂ ಪ್ರದೇಶಗಳಲ್ಲಿ ಚೀನಾ ರನ್‌ವೇಗಳನ್ನು ನಿರ್ಮಾಣ ಮಾಡಿದೆ.

ಯಾಕಿಷ್ಟು ಪ್ರಾಮುಖ್ಯತೆ?

  • ಅಮೆರಿಕದ ಇಂಧನ ಮಾಹಿತಿ ಸಂಸ್ಥೆ ಹೇಳುವ ಪ್ರಕಾರ, ಈ ಸಮುದ್ರದ ಆಳದಲ್ಲಿ 11 ಶತಕೋಟಿ ಬ್ಯಾರೆಲ್‌ ತೈಲ ಮತ್ತು 190 ಲಕ್ಷ ಕೋಟಿ ಕ್ಯೂಬಿಕ್‌ ಫೀಟ್‌ ನೈಸರ್ಗಿಕ ಅನಿಲ ನಿಕ್ಷೇಪಗಳಿವೆ. ಸದ್ಯ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಅತಿ ದೊಡ್ಡ ನಿಕ್ಷೇಪಗಳಿಗಿಂತ ಎಷ್ಟೋ ಪಾಲು ಹೆಚ್ಚಿನ ನಿಕ್ಷೇಪಗಳು ಇಲ್ಲಿವೆ.
  • ಈ ಸಮುದ್ರ ಮೀನುಗಾರಿಕೆಗೂ ಹೇಳಿ ಮಾಡಿಸಿದಂತಿದೆ. ಜಗತ್ತಿನ ಒಟ್ಟು ಮೀನುಗಾರಿಕೆಯಲ್ಲಿ ಶೇ.10ರಷ್ಟು ಮೀನುಗಾರಿಕೆಯನ್ನು ಇಲ್ಲಿ ನಡೆಸಬಹುದಾಗಿದೆ. ಇದರ ಜತೆಗೆ ಈ ಸಮುದ್ರ ವ್ಯಾಪಾರ ಮಾರ್ಗದ ದೃಷ್ಟಿಯಿಂದಲೂ ಅತ್ಯಂತ ಆಯಕಟ್ಟಿನ ಮಾರ್ಗವಾಗಿದೆ.
  • ಒಂದು ಅಂದಾಜಿನ ಪ್ರಕಾರ, 5.3 ಲಕ್ಷ ಕೋಟಿ ಡಾಲರ್‌ ಅಧಿಕ ಮೌಲ್ಯದ ವಸ್ತುಗಳನ್ನು ಈ ಸಮುದ್ರ ಮಾರ್ಗದ ಮೂಲಕ ಪ್ರತಿ ವರ್ಷ ಸಾಗಿಸಲಾಗುತ್ತದೆ. ಇದು ಜಗತ್ತಿನ ಒಟ್ಟು ಕಡಲು ವ್ಯಾಪಾರದ ಶೇ.30ರಷ್ಟು ಎಂದು ಹೇಳಲಾಗುತ್ತದೆ. ಅಮೆರಿಕದ ಜತೆಗೆ ವಾರ್ಷಿಕ ತೈಲ ಮತ್ತು 2 ಲಕ್ಷ ಕೋಟಿ ಮೌಲ್ಯದ ವ್ಯಾಪಾರ ಈ ಮಾರ್ಗದ ಮೂಲಕ ನಡೆಯುತ್ತದೆ.

 

ಚೀನಾ ಬಲ ಹೆಚ್ಚುತ್ತಿದೆಯೇ?

  • ಜಗತ್ತಿನಲ್ಲೇ ವೇಗದಲ್ಲಿ ಬೆಳೆಯುತ್ತಿರುವ ರಾಷ್ಟ್ರವಾಗಿ ಗುರುತಿಸಿಕೊಳ್ಳುತ್ತಿರುವ ಚೀನಾ, ತನ್ನ ‘ಹಿತ್ತಲಿನ ಸಮುದ್ರ’ದ ಮೇಲೆ ನಿಯಂತ್ರಣ ಸಾಧಿಸುವುದು ಅದಕ್ಕೆ ಪ್ರತಿಷ್ಠೆಯ ವಿಷಯವೇ ಸರಿ. ಇಂಥ ನೀತಿಯನ್ನು ಪಶ್ಚಿಮ ರಾಷ್ಟ್ರಗಳು ಶತಮಾನಗಳಿಂದಲೂ ಮಾಡಿಕೊಂಡು ಬಂದಿವೆ.
  • ದಕ್ಷಿಣ ಚೀನಾ ಸಮುದ್ರದ ಮೇಲೆ ಪುರಾತನ ಕಾಲದಿಂದಲೂ ಚೀನಾ ಪ್ರಭಾವ ಇದೆ ಎಂದು ಅದು ಭಾವಿಸಿಕೊಳ್ಳುತ್ತದೆ. ಮತ್ತೆ, ಇದರ ಮೇಲಿನ ನಿಯಂತ್ರಣ ಸಾಧಿಸುವುದು ಅದಕ್ಕೆ ಈ ಪ್ರದೇಶದ ಮೇಲಿನ ನಿಯಂತ್ರಣ ಕಾಯ್ದುಕೊಳ್ಳುವುದೇ ಆಗಿದೆ. ಎಲ್ಲ ಕಡೆಯೂ ತನ್ನ ಹಿತಾಸಕ್ತಿಗೋಸ್ಕರ ರಾಜಕೀಯ ಮೇಲಾಟ ನಡೆಸುವ ಅಮೆರಿಕ ಇಲ್ಲೂ ಸುಮ್ಮನೆ ಕೂತಿಲ್ಲ. ಹಾಗಾಗಿಯೇ, ಚೀನಾ ನಾಯಕರಿಗೆ ಅಮೆರಿಕದ ಉದ್ದೇಶಗಳ ಮೇಲೆ ಯಾವಾಗಲೂ ಅಪನಂಬಿಕೆ ಇದ್ದೇ ಇದೆ.
  • ಈ ಸಮುದ್ರದ ಮೇಲೆ ನಿಯಂತ್ರಣ ಸಾಧಿಸುವುದರ ಮೂಲಕ, ಒಂದು ರೀತಿಯಲ್ಲಿ ಊಹಾತ್ಮಕ ಬೆದರಿಕೆಗಳನ್ನು ಹಿಮ್ಮೆಟ್ಟಿಸಲು ಅದು ಅಣಿಯಾಗುತ್ತಿದೆ.

ಇದರಲ್ಲಿ ಅಮೆರಿಕದ ಪಾತ್ರವೇನು?

 

  • ಫಿಲಿಪ್ಪೀನ್ಸ್‌ನ ಸ್ನೇಹಿತ ರಾಷ್ಟ್ರವಾಗಿ ಅದರ ಹಿತಾಸಕ್ತಿ ಕಾಪಾಡುವುದು ತನ್ನ ಕರ್ತವ್ಯ ಎಂದು ಅಮೆರಿಕ ತಿಳಿದುಕೊಂಡಿದೆ. ಇದೇ ವೇಳೆ, ಜಗತ್ತಿನ ಅತ್ಯಂತ ಬಲಾಢ್ಯ ರಾಷ್ಟ್ರವಾಗಿರುವುದರಿಂದ ಸಮುದ್ರ ಮಾರ್ಗಗಳನ್ನು ಮುಕ್ತವಾಗಿಡುವುದು ಮತ್ತು ಅಂಥ ಮಾರ್ಗಗಳ ಮೇಲೆ ತನ್ನ ನೌಕಾ ಬಲ ಪ್ರಯೋಗಿಸಿ ಕಾವಲು ಕಾಯುವುದು ಅಮೆರಿಕದ ಹಿತಾಸಕ್ತಿಯೂ ಹೌದು.
  • ಮತ್ತೊಂದು ರೀತಿಯಲ್ಲಿ, ಪ್ರಾದೇಶಿಕ ವಿವಾದಗಳನ್ನು ಬಗೆಹರಿಸಲು ಅಮೆರಿಕ ಬಿಟ್ಟು ಮತ್ಯಾರಿಗೆ ಸಾಧ್ಯ ಅಲ್ಲವೇ? ಇದರಿಂದಲೇ ಅದು ದಕ್ಷಿಣ ಚೀನಾ ಸಮುದ್ರ ವಿವಾದದಲ್ಲೂ ತನ್ನನ್ನು ತಾನು ಪಾಲುದಾರನನ್ನಾಗಿ ಮಾಡಿಕೊಂಡಿದೆ.

SOURCE-THE HINDU

 

5.ದ್ವಿ ತೆರಿಗೆ ತಪ್ಪಿಸಲು ಮತ್ತು ಆದಾಯದ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ ಆರ್ಥಿಕ ವಂಚನೆ ತಡೆಯಲು ಭಾರತ ಮತ್ತು ಕಿರ್ಗಿಜ್ ನಡುವಿನ ಒಪ್ಪಂದದ ತಿದ್ದುಪಡಿಯ ಶಿಷ್ಟಾಚಾರಕ್ಕೆ ಸಂಪುಟದ ಅನುಮೋದನೆ

ಪ್ರಮುಖ ಸುದ್ದಿ

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದ್ವಿ ತೆರಿಗೆ ತಪ್ಪಿಸಲು ಮತ್ತು ಆದಾಯದ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ ಆರ್ಥಿಕ ವಂಚನೆ ತಡೆಯಲು ಭಾರತ ಮತ್ತು ಕಿರ್ಗಿಜ್ ನಡುವಿನ ಒಪ್ಪಂದದ ತಿದ್ದುಪಡಿಯ ಶಿಷ್ಟಾಚಾರಕ್ಕೆ ತನ್ನ ಅನುಮೋದನೆ ನೀಡಿದೆ.
  • ದ್ವಿ ತೆರಿಗೆ ತಡೆ ಒಪ್ಪಂದ (ಡಿಟಿ.ಎಎ) ತಿದ್ದುಪಡಿಯ ಶಿಷ್ಟಾಚಾರವು ಡಿಟಿಎಎಯ ಅನುಚ್ಛೇದ 26 (ಮಾಹಿತಿ ವಿನಿಮಯ)ನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ನವೀಕರಿಸುವ ಉದ್ದೇಶ ಹೊಂದಿದೆ.
  • ನವೀಕೃತ ಅನುಚ್ಛೇದವು ಸಾಧ್ಯವಾದಷ್ಟೂ ವಿಸ್ತೃತ ಮಾಹಿತಿಯ ವಿನಿಮಯಕ್ಕೆ ಅವಕಾಶ ನೀಡುತ್ತದೆ. ಹೊಸ ಪ್ಯಾರಾಗಳಾದ 4 ಮತ್ತು 5ನ್ನು ಡಿಟಿಎಎಯ ಹಾಲಿ ಇರುವ ಅನುಚ್ಛೇದ 26ರಲ್ಲಿ ಅಡಕ ಮಾಡಲಾಗುವುದು, ಇದರಿಂದ ಯಾವ ದೇಶಕ್ಕೆ ಮಾಹಿತಿ ಅಗತ್ಯವಿದೆಯೋ ಅದಕ್ಕೆ, ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಇತ್ಯಾದಿ ಹೊಂದಿರುವ ಆ ಅಗತ್ಯ ಮಾಹಿತಿಯಲ್ಲಿ ತನ್ನ ದೇಶೀಯ ತೆರಿಗೆಯ ಹಿತಾಸಕ್ತಿ ಇಲ್ಲವೆಂಬ ಕಾರಣಕ್ಕೆ ಮಾಹಿತಿಯನ್ನು ನಿರಾಕರಿಸಲು ಬರುವುದಿಲ್ಲ.
  • ಈ ಶಿಷ್ಟಾಚಾರವು ಡಿಟಿಎಎ ಅಡಿ ಪಡೆದ ಮಾಹಿತಿಯನ್ನು ತನ್ನ ಇತರ ಕಾನೂನು ಜಾರಿ ಉದ್ದಶಗಳಿಗೆ ಬಳಕೆ ಮಾಡಲು ಮತ್ತು ರಾಜ್ಯಗಳಿಗೆ ಬಳಕೆ ಮಾಡಲು ಅಧಿಕಾರ ನೀಡಲು ಪೂರೈಕೆ ಮಾಡಲು ಭಾರತವನ್ನು ಮತ್ತಷ್ಟು ಸಬಲೀಕರಿಸಲಿದೆ.

ಹಿನ್ನೆಲೆ:

  • ಹಾಲಿ ಭಾರತ ಮತ್ತು ಕಿರ್ಗಿಜ್ ಗಣರಾಜ್ಯಗಳ ನಡುವೆ ಇರುವ ಡಿಟಿಎಎಯನ್ನು 2001ರಂದು ಅಧಿಸೂಚಿಸಲಾಗಿತ್ತು ಮತ್ತು 2001ರಿಂದ ಜಾರಿಯಲ್ಲಿತ್ತು.
  • ದ್ವಿತೆರಿಗೆ ತಡೆಯುವ ಮತ್ತು ಆದಾಯ ತೆರಿಗೆಗೆ ಸಂಬಂಧಿಸಿದಂತೆ ಆರ್ಥಿಕ ವಂಚನೆ ತಡೆಗಟ್ಟುವುದಕ್ಕಾಗಿ ಭಾರತ ಮತ್ತು ಕಿರ್ಗಿಜ್ ಗಣರಾಜ್ಯದ ನಡುವೆ ಡಿಟಿಎಎ ತಿದ್ದುಪಡಿ ಶಿಷ್ಟಾಚಾರಕ್ಕೆ, ಎರಡೂ ದೇಶಗಳು ಅಂಕಿತ ಹಾಕಲು ಒಪ್ಪಿಗೆ ಸೂಚಿಸಿವೆ.

 

SOURCE-PIB

 

6.ಪಂಕಜ್ ಆಡ್ವಾಣಿಗೆ 17ನೇ ವಿಶ್ವ ಕಿರೀಟ

ಪ್ರಮುಖ ಸುದ್ದಿ

  • ಭಾರತದ ಅಗ್ರ ಕ್ಯೂ ಆಟಗಾರ ಪಂಕಜ್ ಆಡ್ವಾಣಿ ದಾಖಲೆಯ 17ನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಐಬಿಎಸ್​ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್​ಷಿಪ್​ನಲ್ಲಿ (ಅಂಕ ಮಾದರಿ) ಪ್ರಶಸ್ತಿ ಜಯಿಸುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ.
  • ಬೆಂಗಳೂರಿನ ಆಟಗಾರ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್​ನ ಮೈಕ್ ರಸೆಲ್ ವಿರುದ್ಧ ಸುಲಭ ಜಯ ದಾಖಲಿಸಿದರು.

 ಅತಿ ಹೆಚ್ಚು ವಿಶ್ವ ಕಿರೀಟ

  • ಪಂಕಜ್ ಆಡ್ವಾಣಿ ಯಾವುದೇ ಕ್ರೀಡೆಯಲ್ಲಿ ಅತ್ಯಧಿಕ ಸಂಖ್ಯೆಯ ವಿಶ್ವ ಪ್ರಶಸ್ತಿ ಜಯಿಸಿದ ಭಾರತೀಯರೆಂಬ ಹೆಗ್ಗಳಿಕೆ ಹೊಂದಿದ್ದಾರೆ. ಇದೀಗ ಈ ಸಂಖ್ಯೆ 17ಕ್ಕೆ ವಿಸ್ತರಿಸಿದೆ.

17 ವಿಶ್ವ ಪ್ರಶಸ್ತಿಗಳು

  • # ವಿಶ್ವ ಸ್ನೂಕರ್ ಚಾಂಪಿಯನ್​ಷಿಪ್: 2
  • # ವಿಶ್ವ ಬಿಲಿಯರ್ಡ್ಸ್ (ಸಮಯ ಮಾದರಿ): 7
  • # ವಿಶ್ವ ತಂಡ ಬಿಲಿಯರ್ಡ್ಸ್ ಚಾಂಪಿಯನ್​ಷಿಪ್: 1
  • # ವಿಶ್ವ ಬಿಲಿಯರ್ಡ್ಸ್ (ಅಂಕ ಮಾದರಿ): 5
  • # ವಿಶ್ವ 6-ರೆಡ್ ಸ್ನೂಕರ್: 2

SOURCE-IE

 

7.ದೇಶದ ಅಧೀನ ನ್ಯಾಯಾಂಗಕ್ಕಾಗಿ ಎರಡನೇ ನ್ಯಾಯಾಂಗ ವೇತನ ಆಯೋಗ ನೇಮಕ ಮಾಡಲು ಸಂಪುಟದ ಅನುಮೋದನೆ

ಪ್ರಮುಖ ಸುದ್ದಿ

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೇಶದ ಅಧೀನ ನ್ಯಾಯಾಂಗಕ್ಕಾಗಿ ಎರಡನೇ ನ್ಯಾಯಾಂಗ ವೇತನ ಆಯೋಗ (ಎಸ್.ಎನ್.ಜೆ.ಪಿ.ಸಿ.) ನೇಮಕ ಮಾಡಲು ಸಂಪುಟದ ಅನುಮೋದನೆ ನೀಡಿದೆ.

ಮುಖ್ಯ ಅಂಶಗಳು

  • ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಶ್ರೀ. ಜೆ.ಪಿ. ವೆಂಕಟರಾಮರೆಡ್ಡಿ ನೇತೃತ್ವದ ಆಯೋಗದಲ್ಲಿ ಕೇರಳ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಶ್ರೀ ಆರ್. ಬಸಂತ್ ಸದಸ್ಯರಾಗಿರುತ್ತಾರೆ.
  • ಈ ಆಯೋಗವು ರಾಜ್ಯ ಸರ್ಕಾರಗಳಿಗೆ 18 ತಿಂಗಳುಗಳ ಅವಧಿಯೊಳಗೆ ತನ್ನ ಶಿಫಾರಸುಗಳನ್ನು ಮಾಡಲಿದೆ.
  • ಆಯೋಗವು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯಗಳಲ್ಲಿರುವ ನ್ಯಾಯಾಂಗ ಅಧಿಕಾರಿಗಳ ಪ್ರಸಕ್ತ ಸೇವಾ ಪರಿಸ್ಥಿತಿ ಮತ್ತು ವೇತನ ಸೌಲಭ್ಯಗಳ ಸ್ವರೂಪದ ಪರಿಶೀಲನೆ ನಡೆಸಲಿದೆ.
  • ದೇಶದ ಅಧೀನ ನ್ಯಾಯಾಲಯಗಳಿಗೆ ಸೇರಿದ ನ್ಯಾಯಾಂಗ ಅಧಿಕಾರಿಗಳ ವೇತನ ಸ್ವರೂಪ ಮತ್ತು ಇತರ ಸೌಲಭ್ಯಗಳನ್ನು ನಿಯಂತ್ರಿಸುವ ತತ್ವಗಳನ್ನು ವಿಕಸಿಸುವ ಗುರಿಯನ್ನು ಆಯೋಗವು ಹೊಂದಿದೆ.
  • ವೇತನದ ಜೊತೆಗೆ ನ್ಯಾಯಾಂಗ ಅಧಿಕಾರಿಗಳಿಗೆ ಲಭಿಸುತ್ತಿರುವ ವೈವಿಧ್ಯಮಯ ಭತ್ಯೆ ಮತ್ತು ಸೌಲಭ್ಯಗಳ ಸ್ವರೂಪ ಮತ್ತು ಕಾರ್ಯ ವಿಧಾನ ಮತ್ತು ಕಾರ್ಯ ಪರಿಸರದ ಪರಿಶೀಲನೆಯನ್ನೂ ನಡೆಸಲಿದೆ ಮತ್ತು ಅವುಗಳ ತರ್ಕಬದ್ಧತೆ ಮತ್ತು ಸರಳೀಕರಣಕ್ಕೆ ಸಲಹೆ ನೀಡಲಿದೆ.
  • ಆಯೋಗವು ತನ್ನದೇ ಆದ ಕಾರ್ಯವಿಧಾನಗಳನ್ನು ರೂಪಿಸುತ್ತದೆ ಮತ್ತು ಕಾರ್ಯವನ್ನು ಪೂರೈಸುವ ಅಗತ್ಯವಿರುವ ಪ್ರಕ್ರಿಯೆಗಳನ್ನು ಸೂತ್ರೀಕರಿಸುತ್ತದೆ. ದೇಶದಾದ್ಯಂತ ನ್ಯಾಯಾಂಗ ಅಧಿಕಾರಿಗಳಿಗೆ ಏಕರೂಪವಾದ ಸೇವಾ ಸ್ಥಿತಿಗತಿ ಮತ್ತು ವೇತನಶ್ರೇಣಿ ರೂಪಿಸುವ ಗುರಿಯನ್ನು ಆಯೋಗ ಹೊಂದಿದೆ.
  • ಆಯೋಗದ ಶಿಫಾರಸುಗಳು ನ್ಯಾಯಾಂಗ ಆಡಳಿತದಲ್ಲಿ ಕ್ಷಮತೆ, ನ್ಯಾಯಾಂಗದ ಗಾತ್ರವನ್ನು ಸರಳೀಕರಿಸಲು ಮತ್ತು ಉತ್ತೇಜಿಸಲು ನೆರವಾಗುತ್ತದೆ ಮತ್ತು ಹಿಂದಿನ ಶಿಫಾರಸುಗಳ ಅನುಷ್ಠಾನದಿಂದ ಸೃಷ್ಟಿಯಾಗಿರುವ ವೇತನ ತಾರತಮ್ಯವನ್ನು ನಿವಾರಿಸುತ್ತದೆ.

SOURCE-PIB

 

8.ಗಡಿ ಕಾವಲಿಗೆ ಡ್ರೋನ್

ಪ್ರಮುಖ ಸುದ್ದಿ

  • ಪಾಕಿಸ್ತಾನ ಮತ್ತು ಚೀನಾದ ಗಡಿ ಪ್ರದೇಶದಲ್ಲಿ ನಿಗಾ ಇಡಲು ಭಾರತೀಯ ಸೇನಾಪಡೆಗೆ 600 ಡ್ರೋನ್​ಗಳು ನೆರವಾಗಲಿವೆ. ಚೀನಾ ಹಾಗೂ ಪಾಕಿಸ್ತಾನ ಯೋಧರ ಚಲನವಲನದ ಮೇಲೆ ನಿಗಾ ಇಡುವ ಜತೆಗೆ ಗಡಿಯೊಳಗೆ ನುಸುಳಲು ಯತ್ನಿಸುವ ಉಗ್ರರನ್ನೂ ಪತ್ತೆ ಮಾಡಿ, ಸೂಕ್ತ ಕಾರ್ಯತಂತ್ರ ರೂಪಿಸಲು ಸೇನೆಗೆ ಇದು ನೆರವಾಗಲಿದೆ.
  • ರಕ್ಷಣಾ ಸಚಿವಾಲಯ ಅಂದಾಜು 950 ಕೋಟಿ ರೂ. ವೆಚ್ಚದಲ್ಲಿ 600 ಡ್ರೋನ್​ಗಳನ್ನು ಖರೀದಿಸುತ್ತಿದೆ. ಇವೆಲ್ಲವೂ ಸ್ವದೇಶಿ ನಿರ್ವಿುತವಾಗಿರುವವು ಎಂಬುದು ವಿಶೇಷ.

ಇದರಿಂದಾಗುವ ಪ್ರಯೋಜನವೇನು ?

  • ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಎಸಗಲು ಪಾಕ್ ಉಗ್ರರನ್ನು ರವಾನಿಸುತ್ತದೆ. ಜಮ್ಮು-ಕಾಶ್ಮೀರ ಪ್ರದೇಶದಲ್ಲಿ ಉಗ್ರರು ಭಾರತದ ಗಡಿಯೊಳಗೆ ನುಸುಳುತ್ತಾರೆ. ಇದಕ್ಕೆ ಪಾಕ್ ಸೇನಾಪಡೆ ಎಲ್ಲ ಬಗೆಯ ಸಹಕಾರ ನೀಡುತ್ತದೆ.
  • ಇದರ ಮೇಲೆ ನಿಗಾ ಇಡುವ ಉದ್ದೇಶದಿಂದ ಸರ್ಕಾರ ಗಡಿಯಲ್ಲಿ ನಿಯೋಜನೆಗೊಂಡಿರುವ ಪದಾತಿ ದಳಕ್ಕೆ ಡ್ರೋನ್​ಗಳನ್ನು ಕೊಡಲು ನಿರ್ಧರಿಸಿದೆ. ಭಾರತದ ಯೋಧರು ಈ ವರ್ಷ ಇದುವರೆಗೆ ಗಡಿಯೊಳಗೆ ನುಸಳಲು ಯತ್ನಿಸುತ್ತಿದ್ದ 175ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿದ್ದಾರೆ.
  • ಡ್ರೋನ್​ಗಳು ಗಡಿ ಭಾಗದಲ್ಲಿ 5 ಸಾವಿರ ಮೀಟರ್ ಎತ್ತರದಲ್ಲಿ ಹಾರಾಟ ಕೈಗೊಳ್ಳಲಿವೆ. ಅಂದಾಜು 10 ಕಿ.ಮೀ. ವ್ಯಾಪ್ತಿಯಲ್ಲಿ ನಡೆಯುವ ಚಟುವಟಿಕೆಗಳನ್ನು ಗಮನಿಸಿ, ಚಿತ್ರಗಳನ್ನು ತೆಗೆಯುತ್ತವೆ.
  • ಈ ಚಿತ್ರಗಳನ್ನು ಬಟಾಲಿಯನ್ ಕಮಾಂಡರ್​ಗೆ ರವಾನಿಸುತ್ತವೆ. ಚಿತ್ರಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಬಟಾಲಿಯನ್ ಕಮಾಂಡರ್, ಉಗ್ರರ ನುಸುಳುವಿಕೆ ಪ್ರಯತ್ನ ವಿಫಲಗೊಳಿಸಲು ಸೂಕ್ತ ಕಾರ್ಯತಂತ್ರ ರೂಪಿಸುತ್ತಾರೆ. ಭಯೋತ್ಪಾದನಾ ನಿಗ್ರಹ ಕಾರ್ಯದಲ್ಲಿ ತೊಡಗಿರುವ ರಾಷ್ಟ್ರೀಯ ರೈಫಲ್ಸ್ ಪಡೆಯ ಸಿಬ್ಬಂದಿಗೂ ಡ್ರೋನ್​ಗಳನ್ನು ಕೊಡಲಾಗುವುದೆಂದು ರಕ್ಷಣಾ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ.

 

ಗಡಿಯಲ್ಲಿ ಡ್ರೋನ್ ಬಳಕೆ ಏಕೆ?

  • ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾ ಭಾರತದ ವಿರುದ್ಧ ನಿರಂತರವಾಗಿ ಗಡಿ ತಂಟೆ ಮಾಡುತ್ತಿವೆ. ಪಾಕಿಸ್ತಾನದ ಬಾರ್ಡರ್ ಆಕ್ಷನ್ ಫೋರ್ಸ್ (ಬಿಎಟಿ) ಪಶ್ಚಿಮ ಭಾಗದ ಗಡಿಪ್ರದೇಶದಲ್ಲಿ ಅಪ್ರಚೋದಿತ ದಾಳಿ ನಡೆಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚಾಗುತ್ತಿದೆ.
  • ಬಿಎಟಿಯ ಚಲನವಲನದ ಮೇಲೆ ಗಮನವಿರಿಸುವುದು ಮುಖ್ಯವಾಗಿದೆ. ಚೀನಾ ಗಡಿ ಭಾಗದಲ್ಲಿ 2 ತಿಂಗಳ ಕಾಲ ಡೋಕ್ಲಂ ಬಿಕ್ಕಟ್ಟು ಉಂಟಾಗಿತ್ತು. ಚೀನಿ ಯೋಧರು ಭಾರತದ ಗಡಿ ಪ್ರವೇಶಿಸಲು ಅನುಕೂಲವಾಗುವಂತೆ ವಿವಾದಾತ್ಮಕ ಡೋಕ್ಲಂ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದರು. ಭಾರತದ ಗಡಿಯೊಳಗೆ ನುಸುಳಿ, ಭೂಪ್ರದೇಶ ಅತಿಕ್ರಮಿಸಿದ್ದರು.
  • ಈ ಎಲ್ಲ ಚಟುವಟಿಕೆಗಳ ಮೇಲೆ ನಿಗಾ ಇಡಲು ಡ್ರೋನ್ ಬಳಕೆ ಮುಖ್ಯವಾಗಿದೆ.

 

ನಿಯರ್ ಸ್ಪೇಸ್​ನಲ್ಲಿ ಚೀನಿ ಡ್ರೋನ್​ಗಳು

  • ಚೀನಾ ಕೂಡ ಗಡಿ ಭಾಗದಲ್ಲಿ ಮಿಲಿಟರಿ ಬೇಹುಗಾರಿಕೆಗೆ ಅನುಕೂಲವಾಗುವಂತೆ ಡ್ರೋನ್​ಗಳನ್ನು ಬಳಸುತ್ತಿದೆ. ಇತ್ತೀಚೆಗೆ ಅದು ಸಮುದ್ರ ಮಟ್ಟದಿಂದ 20 ಕಿ.ಮೀ. ಎತ್ತರದ ಪ್ರದೇಶ ನಿಯರ್ ಸ್ಪೇಸ್​ಗೆ (ಭೂಮಿ ಮತ್ತು ಬಾಹ್ಯಾಕಾಶ ವಲಯದ ನಡುವಿನ ಪ್ರದೇಶ) ಪ್ರಾಯೋಗಿಕವಾಗಿ ಡ್ರೋನ್ ಕಳುಹಿಸಿ, ಮಾಹಿತಿ ಸಂಗ್ರಹಿಸಲು ಯತ್ನಿಸಿ ಸಫಲವಾಗಿದೆ.
  • ಈ ಹಿನ್ನೆಲೆಯಲ್ಲಿ ಭಾರತದ ಗಡಿ ರಕ್ಷಣೆ ದೃಷ್ಟಿಯಿಂದ ಡ್ರೋನ್ ಬಳಕೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

 

SOURCE-IE

 

Share